lawyers 
ಸುದ್ದಿಗಳು

132 ಎಪಿಪಿಗಳಿಗೆ ನೇಮಕಾತಿ ಆದೇಶ ರವಾನೆ, 49 ಮಂದಿಗೆ ಎಸ್‌ಪಿಪಿ ಹುದ್ದೆಗೆ ಬಡ್ತಿ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ದಾಖಲೆ ಪರಿಶೀಲನೆ ಇತರೆ ಕಾರಣಗಳಿಗಾಗಿ 143 ಅಭ್ಯರ್ಥಿಗಳ ಪೈಕಿ 11 ಮಂದಿಗೆ ನೇಮಕಾತಿ ಆದೇಶ ನೀಡಲಾಗಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ ಸರ್ಕಾರ.

Bar & Bench

ವಕೀಲ ಸಮುದಾಯ ಬಹುವಾಗಿ ನಿರೀಕ್ಷಿಸುತ್ತಿದ್ದ ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿಯ ಬಗ್ಗೆ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ಸಕಾರಾತ್ಮಕ ಮಾಹಿತಿ ನೀಡಿದೆ.

ಸೆಪ್ಟೆಂಬರ್‌ 15ರಂದು 132 ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಅಭಿಯೋಜನಾ ಇಲಾಖೆಯು ನೇಮಕಾತಿ ಆದೇಶ ರವಾನಿಸಿದೆ. ಅಲ್ಲದೇ, 49 ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಹಿರಿಯ ಸರ್ಕಾರಿ ಅಭಿಯೋಜಕ ಹುದ್ದೆಗೆ ಬಡ್ತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ರಾಜ್ಯದಾದ್ಯಂತ ಖಾಲಿ ಇರುವ ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸರ್ಕಾರದ ಪರ ವಕೀಲರು ಪೀಠಕ್ಕೆ ಮೆಮೊ ಸಲ್ಲಿಸಿ “ಒಟ್ಟು 143 ಸಹಾಯಕ ಸರ್ಕಾರಿ ಅಭಿಯೋಜಕರ ಪೈಕಿ ಸೆಪ್ಟೆಂಬರ್‌ 15ರಂದು 132 ಮಂದಿಗೆ ಅಭಿಯೋಜನಾ ಇಲಾಖೆಯಿಂದ ನೇಮಕಾತಿ ಆದೇಶ ಕಳುಹಿಸಿಕೊಡಲಾಗಿದೆ. 49 ಮಂದಿಗೆ ಹಿರಿಯ ಸರ್ಕಾರಿ ಅಭಿಯೋಜಕ ಹುದ್ದೆಗೆ ಬಡ್ತಿ ನೀಡಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.

ಇದನ್ನು ಆಲಿಸಿದ ಪೀಠವು “ಜೂನ್‌ 20ರ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರವು ಮೆಮೊ ಸಲ್ಲಿಸಿದೆ. ದಾಖಲೆಗಳ ಪರಿಶೀಲನೆ ಮತ್ತು ಪೊಲೀಸರ ವರದಿ ಆಧರಿಸಿ 132 ಅಂತಿಮ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅವರಿಗೆಲ್ಲರಿಗೂ ಸೆಪ್ಟೆಂಬರ್‌ 15ರಂದು ನೇಮಕಾತಿ ಆದೇಶವನ್ನು ಅಭಿಯೋಜನಾ ಇಲಾಖೆ ಕಳುಹಿಸಿದೆ. ದಾಖಲೆ ಪರಿಶೀಲನೆ ಇತರೆ ಕಾರಣಗಳಿಗಾಗಿ 143 ಅಭ್ಯರ್ಥಿಗಳ ಪೈಕಿ 11 ಮಂದಿಗೆ ನೇಮಕಾತಿ ಆದೇಶ ನೀಡಲಾಗಿಲ್ಲ ಎಂದು ತಿಳಿಸಲಾಗಿದೆ” ಎಂದು ಆದೇಶದಲ್ಲಿ ದಾಖಲಿಸಿದೆ.

ಮುಂದುವರಿದು, “ರಾಜ್ಯ ಸರ್ಕಾರವು 49 ಮಂದಿ ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಹಿರಿಯ ಸರ್ಕಾರಿ ಅಭಿಯೋಜಕರ ಹುದ್ದೆಗೆ ಪದೋನ್ನತಿ ನೀಡಿರುವುದರಿಂದ ಖಾಲಿಯಾದ ಹುದ್ದೆ ತುಂಬಲು ಸರ್ಕಾರ ಕ್ರಮಕೈಗೊಳ್ಳಲಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಇದಲ್ಲದೇ, ಅಂತಿಮವಾಗಿ ಕ್ರಮಕೈಗೊಂಡ ವರದಿಯನ್ನು ಮೂರು ವಾರಗಳ ಬಳಿಕ ಸಲ್ಲಿಸಬೇಕು ಎಂದು ಪೀಠವು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.