Vidhana Soudha 
ಸುದ್ದಿಗಳು

ಎಸಿಬಿ ಮುಖ್ಯಸ್ಥರ ನೇಮಕಾತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೀಡಿದ ಮೂರು ನಿರ್ದೇಶನಗಳೇನು?

ಸಾಮಾನ್ಯ ಜನರ ಹಿತದೃಷ್ಟಿಯಿಂದ ನ್ಯಾಯಾಲಯದ ಮುಂದಿರುವ ದಾಖಲೆಗಳನ್ನು ಆಧರಿಸಿ ನಿರ್ದೇಶನಗಳನ್ನು ಮಾಡಲಾಗುತ್ತಿದೆ. ಇದನ್ನು ಜಾರಿಗೊಳಿಸುವುದು ಬಿಡುವುದು ಅವರಿಗೆ (ಸರ್ಕಾರಕ್ಕೆ) ಸೇರಿದ್ದು ಎಂದ ನ್ಯಾಯಾಲಯ.

Bar & Bench

ಭ್ರಷ್ಟಚಾರ ನಿಯಂತ್ರಣಕ್ಕೆ ಸಂಸ್ಥೆಯ ಅತ್ಯುನ್ನತ ಸ್ಥಾನಕ್ಕೆ ಅಧಿಕಾರಿಯನ್ನು ನೇಮಕ ಮಾಡುವಾಗ ವಿಶ್ವಾಸಾರ್ಹತೆ, ಪ್ರಾಮಾಣಿಕತೆ ಮಾನದಂಡವಾಗಬೇಕು ಎಂದಿರುವ ಕರ್ನಾಟಕ ಹೈಕೋರ್ಟ್‌ ಸೋಮವಾರ ರಾಜ್ಯ ಸರ್ಕಾರಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕರಾಗಿದ್ದ ಉಪ ತಹಶೀಲ್ದಾರ್‌ ಅವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸಂದೇಶ್‌ ಅವರು ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಕಾರ್ಯದರ್ಶಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ.

  1. ಭ್ರಷ್ಟಾಚಾರ ನಿಯಂತ್ರಣಕ್ಕೆ ಸೃಷ್ಟಿಸಲಾದ ಸಂಸ್ಥೆಗೆ ಅಧಿಕಾರಿಯನ್ನು ನೇಮಕ ಮಾಡುವಾಗ ಅಧಿಕಾರಿಯು ವಿಶ್ವಾಸಾರ್ಹತೆ ಹೊಂದಿರಬೇಕು. ಸಂಸ್ಥೆಯ ಘನತೆಯನ್ನು ಎತ್ತರಿಸುವುದನ್ನು ಪರಿಗಣಿಸಬೇಕು.

  2. ಎಸಿಬಿಯಂಥ ಸಂಸ್ಥೆಯ ಉನ್ನತ ಸ್ಥಾನಕ್ಕೆ ಅಧಿಕಾರಿಯನ್ನು ನೇಮಕ ಮಾಡುವಾಗ ಡಿಪಿಎಆರ್‌ ಕಾರ್ಯದರ್ಶಿಯು ನೇಮಕಗೊಳ್ಳಬಹುದಾದ ಅಧಿಕಾರಿಯ ಸೇವಾ ದಾಖಲೆ ಮತ್ತು ಅಧಿಕಾರಿಯ ಪ್ರಾಮಾಣಿಕತೆಗೆ ಸಂಬಂಧಿಸಿದ ವಿಚಾರಗಳನ್ನು ಮುಖ್ಯ ಕಾರ್ಯದರ್ಶಿಯ ಮುಂದಿಡಬೇಕು. ಹಿಂದೆ, ಡಿಪಿಎಆರ್‌ ಕಾರ್ಯದರ್ಶಿಯು ಒತ್ತಡದಿಂದ ಅದನ್ನು ಪಾಲಿಸಲಾಗಿಲ್ಲ ಎಂದು ಹೇಳಿದ್ದರು. ಜನರ ಹಿತದೃಷ್ಟಿಯಿಂದಾಗಿ ಒತ್ತಡಕ್ಕೆ ಮಣಿಯಬಾರದು.

  3. ಬಾಹ್ಯ ಮತ್ತು ಆಂತರಿಕ ಒತ್ತಡಕ್ಕೆ ಮಣಿದು ಎಸಿಬಿಯ ಉನ್ನತ ಸ್ಥಾನಕ್ಕೆ ಅಧಿಕಾರಿಯನ್ನು ನೇಮಕ ಮಾಡಬಾರದು. ಎಸಿಬಿಯ ಉನ್ನತ ಹುದ್ದೆಗೆ ನೇಮಕವಾಗುವ ಅಧಿಕಾರಿಯ ಕುಟುಂಬದ ಯಾವುದೇ ಸದಸ್ಯರು ಎಸಿಬಿ ಅಥವಾ ಲೋಕಾಯುಕ್ತದಿಂದ ತನಿಖೆ ಎದುರಿಸುತ್ತಿರಬಾರದು. ಎಸಿಬಿ ಮತ್ತು ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಅಧಿಕಾರಿಯ ಕುಟುಂಬ ಸದಸ್ಯರು ಅಥವಾ ಸಂಬಂಧಿಗಳು ಇದರ ಲಾಭ ಪಡೆಯುವ ಸಾಧ್ಯತೆ ಇರುತ್ತದೆ.

ನ್ಯಾಯಾಲಯದ ಆದೇಶವನ್ನು ರಿಜಿಸ್ಟ್ರಿಯು ಮುಖ್ಯ ಕಾರ್ಯದರ್ಶಿ ಮತ್ತು ಡಿಪಿಎಆರ್‌ ಕಾರ್ಯದರ್ಶಿಗೆ ತಿಳಿಸಬೇಕು ಎಂದು ಪೀಠ ಹೇಳಿದೆ.

ನ್ಯಾಯಾಲಯದ ಮುಂದಿರುವ ದಾಖಲೆಗಳು ಮತ್ತು ತನಿಖೆಯ ಮೇಲೆ ನಿಗಾ ಇಟ್ಟಿರುವುದನ್ನು ಪರಿಗಣಿಸಿ ಮುಖ್ಯ ಕಾರ್ಯದರ್ಶಿ ಮತ್ತು ಡಿಎಪಿಆರ್‌ಗೆ ಅಧಿಕಾರಿಯನ್ನು ನೇಮಕ ಮಾಡುವಾಗ ಅದರಲ್ಲೂ ಭ್ರಷ್ಟಾಚಾರ ನಿಯಂತ್ರಣದ ಸಂಸ್ಥೆಗೆ ಅಧಿಕಾರಿಯನ್ನು ನೇಮಕ ಮಾಡುವಾಗ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಳಂಕಿತ ಅಧಿಕಾರಿಗಳನ್ನು ನೇಮಕ ಮಾಡಬಾರದು ಎಂದು ಪೀಠ ಹೇಳಿದೆ.

ಇದೇ ವೇಳೆ ನ್ಯಾಯಮೂರ್ತಿಗಳು, ಸಾಮಾನ್ಯ ಜನರ ಹಿತದೃಷ್ಟಿಯಿಂದ ನ್ಯಾಯಾಲಯದ ಮುಂದಿರುವ ದಾಖಲೆಗಳನ್ನು ಆಧರಿಸಿ ಈ ನಿರ್ದೇಶನಗಳನ್ನು ನೀಡಲಾಗುತ್ತಿದ್ದು, ಇದನ್ನು ಜಾರಿಗೊಳಿಸುವುದು ಬಿಡುವುದು ಅವರಿಗೆ (ಸರ್ಕಾರಕ್ಕೆ) ಸೇರಿದ್ದು ಎಂದು ಮೌಖಿಕವಾಗಿ ಹೇಳಿದರು.