NLSIU, SIAC 
ಸುದ್ದಿಗಳು

ಸಿಂಗಪೋರ್‌ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಒಡಂಬಡಿಕೆ

ಕಾನೂನು ಶಾಲೆಯ ವಿದ್ಯಾರ್ಥಿಗಳಿಗೆಎಸ್‌ಐಎಸಿಯಲ್ಲಿ ಇಂಟರ್ನ್‌ಶಿಪ್‌ ಸೌಲಭ್ಯ ಕಲ್ಪಿಸಲು ಮತ್ತು ಶಾಲೆಯ ಕಾನೂನು ಪಠ್ಯದಲ್ಲಿ 'ಎಸ್‌ಐಎಸಿ ಮತ್ತು ಸಾಂಸ್ಥಿಕ ಮಧ್ಯಸ್ಥಿಕೆ' ವಿಷಯವನ್ನು ಅಳವಡಿಸಲು ಒಡಂಬಡಿಕೆಗೆ ಸಹಿ ಹಾಕಲಾಗಿದೆ.

Bar & Bench

ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ (ತರಬೇತಿ) ಅವಕಾಶಗಳನ್ನು ಸುಗಮಗೊಳಿಸಲು ಮತ್ತು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಪ್ರಾಕ್ಟೀಸ್‌ ಕುರಿತಂತೆ ಅರಿವು ಮೂಡಿಸುವ ಸಲುವಾಗಿ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಮತ್ತು ಸಿಂಗಪೋರ್‌ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ನಿಟ್ಟಿನಲ್ಲಿ, ಜನವರಿ 5ರಂದು ಎನ್ಎಲ್ಎಸ್ಐಯು ಉಪಕುಲಪತಿ ಡಾ. ಸುಧೀರ್ ಕೃಷ್ಣಸ್ವಾಮಿ ಮತ್ತು ಎಸ್ಐಎಸಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗ್ಲೋರಿಯಾ ಲಿಮ್ ಅವರು ವರ್ಚುವಲ್ ಸಮಾರಂಭದಲ್ಲಿ ಪಾಲ್ಗೊಂಡು ತಿಳುವಳಿಕೆ ಜ್ಞಾಪನಾಪತ್ರಕ್ಕೆ ಸಹಿ ಹಾಕಿದರು.

ಸಮಾರಂಭದಲ್ಲಿ ಎಸ್ಐಎಸಿಯ ದಕ್ಷಿಣ ಏಷ್ಯಾ ನಿರ್ದೇಶಕಿ ಮತ್ತು ಮುಖ್ಯಸ್ಥೆ ಶ್ವೇತಾ ಬಿಧುರಿ , ಕಾರ್ಯತಂತ್ರ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಸ್ಟೆಫಿ ಮೇರಿ ಪನ್ನೋಸ್, ಎನ್ಎಲ್ಎಸ್ಐಯುನ ಕುಲಸಚಿವ ಡಾ. ನಿಗಮ್ ನುಗ್ಗೇಹಳ್ಳಿ ಹಾಗೂ ಕಾನೂನು ಶಾಲೆಯ ಎಡಿಆರ್‌ ಡಾ. ಸಿಂಘಾನಿಯಾ ಅಧ್ಯಯನ ಪೀಠದ ಅಧ್ಯಕ್ಷ ಡಾ.ಹರಿಶಂಕರ್ ಕೆ. ಸತ್ಯಪಾಲನ್‌ ಅವರು ಭಾಗವಹಿಸಿದ್ದರು.

ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿಗಳಿಗೆಎಸ್‌ಐಎಸಿಯಲ್ಲಿ ಇಂಟರ್ನ್‌ಶಿಪ್‌ ಸೌಲಭ್ಯ ಕಲ್ಪಿಸಲು ಮತ್ತು ಶಾಲೆಯ ಕಾನೂನು ಪಠ್ಯದಲ್ಲಿ 'ಎಸ್‌ಐಎಸಿ ಮತ್ತು ಸಾಂಸ್ಥಿಕ ಮಧ್ಯಸ್ಥಿಕೆ' ವಿಷಯವನ್ನು ಅಳವಡಿಸಲು ಒಡಂಬಡಿಕೆಗೆ ಸಹಿ ಹಾಕಲಾಗಿದೆ.

ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯ ಅಭಿವೃದ್ಧಿ ಮತ್ತು ಪ್ರಾಕ್ಟೀಸ್‌ ಉತ್ತೇಜಿಸಲು ಭಾರತದಲ್ಲಿ ಜಂಟಿ ತರಬೇತಿ ಕಾರ್ಯಕ್ರಮ, ವಾರ್ಷಿಕ ಉಪನ್ಯಾಸ, ಸೆಮಿನಾರ್‌ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಎರಡೂ ಸಂಸ್ಥೆಗಳು ಮುಂದಾಗಲಿವೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಎನ್ಎಲ್ಎಸ್ಐಯು ಉಪಕುಲಪತಿ ಪ್ರೊಫೆಸರ್ (ಡಾ) ಸುಧೀರ್ ಕೃಷ್ಣಸ್ವಾಮಿ, "ಸಿಂಗಾಪುರವನ್ನು ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯ ಕಾನೂನು ಮತ್ತು ಅಭ್ಯಾಸದ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಆಧಾರ ಎಸ್‌ಐಎಸಿ ಆಗಿದೆ. ಭಾರತವು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವಾಗಿ ತನ್ನನ್ನು ಸಾಕಾರಗೊಳಿಸಿಕೊಳ್ಳುವ ಗುರಿ ಹೊಂದಿರುವುದರಿಂದ ಈ ನಿಟ್ಟಿನಲ್ಲಿ ಅಗತ್ಯ ಶೈಕ್ಷಣಿಕ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಎನ್ಎಲ್ಎಸ್ಐಯು ಮುಂದಾಳತ್ವ ವಹಿಸಿದೆ. ಭಾರತೀಯ ಕಾನೂನು ಪರಿಸರಕ್ಕೆ ಅಂತಾರಾಷ್ಟ್ರೀಯ ಅತ್ಯುತ್ತಮ ಮಾನದಂಡಗಳು ಮತ್ತು ಉತ್ತಮ ಅಭ್ಯಾಸಗಳನ್ನು ತರಲು, ಅಂತಾರಾಷ್ಟ್ರೀಯ ವಾಣಿಜ್ಯ ವಿವಾದ ಪರಿಹಾರ ಕಾರ್ಯವಿಧಾನಗಳ ಅಭಿವೃದ್ಧಿಯನ್ನು ಜಂಟಿಯಾಗಿ ಉತ್ತೇಜಿಸಲು ಹಾಗೂ ಮುಂದಿನ ಪೀಳಿಗೆಯ ಮಧ್ಯಸ್ಥಿಕೆ ವೃತ್ತಿಪರರಲ್ಲಿ ಅಂತಾರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸಲು ಎಸ್ಐಎಸಿಯೊಂದಿಗಿನ ಈ ಒಪ್ಪಂದ ನಮಗೆ ಸಹಾಯ ಮಾಡುತ್ತದೆ" ಎಂದಿದ್ದಾರೆ. ಎಸ್ಐಎಸಿಯ ಸಿಇಒ ಗ್ಲೋರಿಯಾ ಲಿಮ್ ಒಪ್ಪಂದದ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.