Justice Chandra Dhari Singh, Delhi High Court 
ಸುದ್ದಿಗಳು

ದೆಹಲಿ ವಿಧಾನಸಭೆ ಕಾರ್ಯದರ್ಶಿ ನೇಮಿಸುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್‌ಗೆ ಮಾತ್ರ ಇದೆ: ದೆಹಲಿ ಹೈಕೋರ್ಟ್

ಒಮ್ಮೆ ನೇಮಕಾತಿಯು ಆರಂಭದಿಂದಲೂ ಅನೂರ್ಜಿತವಾಗಿದೆ ಎಂದು ಕಂಡುಬಂದರೆ ಆಗ ಅರ್ಜಿದಾರರು ಅಕ್ರಮ ನೇಮಕಾತಿಯನ್ನು ಆಧರಿಸಿ ಯಾವುದೇ ಕಾನೂನು ಬದ್ಧ ಹಕ್ಕು ಸಾಧನೆ ಮಾಡಲಾಗದು ಎಂದು ನ್ಯಾಯಾಲಯ ಒತ್ತಿಹೇಳಿತು.

Bar & Bench

ದೆಹಲಿ ವಿಧಾನಸಭೆ ಕಾರ್ಯದರ್ಶಿಯನ್ನು ನೇಮಕ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇದೆಯೇ ವಿನಾ ಸ್ಪೀಕರ್‌ಗೆ ಅಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಸಿದ್ಧಾರ್ಥ ರಾವ್‌ ಮತ್ತು ದೆಹಲಿ ಸರ್ಕಾರನ ನಡುವಣ ಪ್ರಕರಣ].

ನೇಮಕಾತಿ ವಿಚಾರವಾಗಿ ಹೆಚ್ಚೆಂದರೆ ಸಮಾಲೋಚನೆಯ ಹಂತದಲ್ಲಿ ಸ್ಪೀಕರ್ ಅವರು ಅಭಿಪ್ರಾಯ ನೀಡಬಹುದಾಗಿದೆ ಎಂದು ನ್ಯಾಯಮೂರ್ತಿ ಚಂದ್ರ ಧರಿ ಸಿಂಗ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

"ಕಾರ್ಯದರ್ಶಿ ಹುದ್ದೆಯ ನೇಮಕಾತಿ, ದೆಹಲಿ ವಿಧಾನಸಭೆ ಸ್ಪೀಕರ್ ಕಚೇರಿಯ ವ್ಯಾಪ್ತಿಯಿಂದ ಹೊರಗಿದೆ, ಸ್ಪೀಕರ್ ಅವರು, ಹೆಚ್ಚೆಂದರೆ, ಸಮಾಲೋಚನೆಯ ಹಂತಕ್ಕೊಳಪಟ್ಟಂತೆ ಅಭಿಪ್ರಾಯ ನೀಡಬಹುದಾಗಿದೆ. ಅವರ ಸಮ್ಮತಿ ಬೇಕೆಂದೇನೂ ಇಲ್ಲ" ಎಂದು ನ್ಯಾಯಾಲಯ ಹೇಳಿತು.

ಅರ್ಜಿ ಸಲ್ಲಿಸಿದ್ದ ವಿಧಾನಸಭೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ್‌ ರಾವ್‌ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ನಂತರ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಅಲ್ಲದೆ, ದೆಹಲಿ ವಿಧಾನಸಭೆಯಲ್ಲಿ ಅವರು ಹೊಂದಿದ್ದ ಎಲ್ಲಾ ಹುದ್ದೆಗಳು ಕಾನೂನುಬಾಹಿರ ಎಂದು ಹೇಳಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅರ್ಜಿದಾರರನ್ನು ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಲು ಶಿಫಾರಸು ಮಾಡಲಾಗಿತ್ತು. ಆದರೆ ಸ್ಪೀಕರ್‌ ಶಿಫಾರಸಿನ ಬಳಿಕ ಆ ಹುದ್ದೆಯನ್ನು ವಿಧಾನಸಭೆಯಲ್ಲಿ ಶಾಶ್ವತವಾಗಿ ವಿಲೀನ ಮಾಡಲಾಗಿತ್ತು.   

ಯಾವುದೇ ಕಾರಣವಿಲ್ಲದೆ, ಕಾನೂನನ್ನು ಸಂಪೂರ್ಣವಾಗಿ ಕಡೆಗಣಿಸಿ ಅವರ ಸೇವೆ ಅಂತ್ಯಗೊಳಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಕಾರ್ಯಾಂಗ ವರ್ಗಾಯಿಸಲು ಅಥವಾ ನಿಯಂತ್ರಿಸಲು ಆಗದಂತೆ ವಿಧಾನಸಭೆಗೆ ಅಸೆಂಬ್ಲಿ ಕಾರ್ಯದರ್ಶಿ ಹುದ್ದೆಯನ್ನು ವಿಶೇಷವಾಗಿ ಸೃಜಿಸಲಾಗಿದೆ ಎಂದು ಅವರು ವಾದಿಸಿದ್ದರು.

ಹೀಗಾಗಿ ಸ್ಪೀಕರ್‌ಗೆ ಕಾರ್ಯದರ್ಶಿಯನ್ನು ನೇಮಕ ಮಾಡುವ ಅಧಿಕಾರ ಇದೆಯೇ ಎಂಬುದು ನ್ಯಾಯಾಲಯದ ಎದುರಿದ್ದ ಮುಖ್ಯ ಪ್ರಶ್ನೆಯಾಗಿತ್ತು. ಸಾಂವಿಧಾನಿಕ ನಿಯಮಾವಳಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಈ ಪ್ರಶ್ನೆಗೆ ನಕಾರಾತ್ಮಕ ಉತ್ತರ ಕಂಡುಕೊಂಡಿತು.

ಒಮ್ಮೆ ನೇಮಕಾತಿಯು ಆರಂಭದಿಂದಲೂ ಅನೂರ್ಜಿತವಾಗಿದೆ ಎಂದು ಕಂಡುಬಂದರೆ ಆಗ ಅರ್ಜಿದಾರರು ಅಕ್ರಮ ನೇಮಕಾತಿಯನ್ನು ಆಧರಿಸಿ ಯಾವುದೇ ಕಾನೂನು ಬದ್ಧ ಹಕ್ಕು ಸಾಧನೆ ಮಾಡಲಾಗದು ಎಂದು ನ್ಯಾಯಾಲಯ ಒತ್ತಿಹೇಳಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Siddharth_Rao_v_Government_of_NCT.pdf
Preview