ಸೂಕ್ತ ಕಾರ್ಯವಿಧಾನದ ಸುರಕ್ಷತೆ ಇಲ್ಲದ ಕಣ್ಗಾವಲು ವ್ಯಕ್ತಿಯ ಖಾಸಗಿತನದ ಮೂಲಭೂತ ಹಕ್ಕಿಗೆ ಹಾನಿ ಉಂಟು ಮಾಡಲಿದೆ ಎಂದು ಇತ್ತೀಚೆಗೆ ಅಭಿಪ್ರಾಯಪಟ್ಟಿರುವ ರಾಜಸ್ಥಾನ ಹೈಕೋರ್ಟ್ ರಾಜ್ಯ ಗೃಹ ಸಚಿವಾಲಯ ಜಾರಿಗೊಳಿಸಿದ್ದ ಮೂರು ಫೋನ್ ಟ್ಯಾಪಿಂಗ್ ಆದೇಶಗಳನ್ನು ರದ್ದುಪಡಿಸಿತು [ಶಶಿಕಾಂತ್ ಜೋಶಿ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].
ಖಾಸಗಿತನದ ಹಕ್ಕನ್ನು ಮನಸೋಇಚ್ಛೆ ಉಲ್ಲಂಘಿಸುವುದನ್ನು ತಡೆಯುವುದಕ್ಕಾಗಿ ಭಾರತೀಯ ಟೆಲಿಗ್ರಾಫ್ ಕಾಯಿದೆ, ಕಾರ್ಯವಿಧಾನದ ಸುರಕ್ಷತೆಗಳನ್ನು ಒದಗಿಸಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಮೂರ್ತಿ ಬೀರೇಂದ್ರ ಕುಮಾರ್ ಬುದ್ಧಿಮಾತು ಹೇಳಿದರು.
ಅರ್ಜಿದಾರರು ಸೇರಿದಂತೆ ಲಂಚ ಪ್ರಕರಣದ ಆರೋಪಿಗಳ 'ಮೊಬೈಲ್ ಫೋನ್ ಕದ್ದಾಲಿಸಲು' 2020 ಮತ್ತು 2021ರಲ್ಲಿ ಮೂರು ಆದೇಶಗಳನ್ನು ರಾಜ್ಯ ಗೃಹ ಸಚಿವಾಲಯ ಜಾರಿಗೊಳಿಸಿತ್ತು. ಭಾರತೀಯ ಟೆಲಿಗ್ರಾಫ್ ಕಾಯಿದೆಯಡಿಯಲ್ಲಿ ಫೋನ್ ಟ್ಯಾಪಿಂಗ್ ಮಾಡಿದ್ದನ್ನು ಸಮರ್ಥಿಸಿಕೊಂಡ ಸರ್ಕಾರಿ ಅಧಿಕಾರಿಗಳು ಅರ್ಜಿದಾರರು ಸಾರ್ವಜನಿಕ ಹುದೆಯಲ್ಲಿದ್ದವರಿಗೆ ಲಂಚ ನೀಡಿದ್ದರು ಎಂದು ಆರೋಪಿಸಿದ್ದರು.
ಫೋನ್ ಕದ್ದಾಲಿಕೆ ನಂತರ, ಭ್ರಷ್ಟಾಚಾರ ತಡೆ ಕಾಯಿದೆಯ ಸಂಬಂಧಿತ ನಿಯಮಾವಳಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.
ಸರ್ಕಾರ ತನ್ನ ಮೊಬೈಲ್ ಫೋನನ್ನು ಕಣ್ಗಾವಲು/ ಬೇಹುಗಾರಿಕೆಗೆ ಒಳಪಡಿಸುವ ಮೂಲಕ ತನ್ನ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ದೂರಿದ್ದರು.
ವಾದಗಳನ್ನು ಆಲಿಸಿದ ಪೀಠ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಅಂತಹ ಕಣ್ಗಾವಲು ಏಕೆ ಮಾಡಲಾಗಿತ್ತು ಎಂಬುದಕ್ಕೆ ಕಾರಣಗಳನ್ನು ಬಹಿರಂಗಪಡಿಸಿಲ್ಲ ಎಂದಿತು. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ಆದೇಶಗಳು ಸ್ಪಷ್ಟವಾಗಿ ಮನಸೋಇಚ್ಛೆಯಿಂದ ಕೂಡಿವೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಬಾಕಿ ಉಳಿದಿರುವ ಕ್ರಿಮಿನಲ್ ವಿಚಾರಣೆ ವೇಳೆ ಅರ್ಜಿದಾರರ ಮೊಬೈಲ್ ಫೋನ್‌ನಿಂದ ಬಂದ ಸಂದೇಶಗಳನ್ನು ಪರಿಗಣಿಸುವುದಿಲ್ಲ ಎಂದು ಕೂಡ ಅದು ಈ ಸಂದರ್ಭದಲ್ಲಿ ತಿಳಿಸಿತು.