ನ್ಯಾ. ಹಿಮಾ ಕೊಹ್ಲಿ 
ಸುದ್ದಿಗಳು

ದೇಶದ ಮಧ್ಯಸ್ಥಿಕೆ ಕ್ಷೇತ್ರ ವಿಸ್ತರಿಸಲು ಆ ವಿಷಯದಲ್ಲಿ ನುರಿತರಾದ ವಕೀಲರು ನಿರ್ಣಾಯಕ: ನ್ಯಾ. ಹಿಮಾ ಕೊಹ್ಲಿ

ಭಾರತೀಯ ಮಧ್ಯಸ್ಥಿಕೆ ಪರಿಷತ್‌ (ಐಸಿಎ) ಗೋವಾದಲ್ಲಿ ಶನಿವಾರ ಆಯೋಜಿಸಿದ್ದ ರಾಜಿ ಮತ್ತು ಮಧ್ಯಸ್ಥಿಕೆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Bar & Bench

ಭಾರತದಲ್ಲಿ ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಸುಧಾರಣೆ ತರಲು ಮತ್ತು ಅದರ ವ್ಯಾಪ್ತಿ ಹಿಗ್ಗಿಸಲು ಆ ವಿಷಯದಲ್ಲಿ ನುರಿತ ವಿಶೇಷ ವಕೀಲ ವರ್ಗ ಇರುವುದು ನಿರ್ಣಾಯಕ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಮಧ್ಯಸ್ಥಿಕೆ ಪರಿಷತ್‌ (ಐಸಿಎ) ಗೋವಾದಲ್ಲಿ ಶನಿವಾರ ಆಯೋಜಿಸಿದ್ದ ರಾಜಿ ಮತ್ತು ಮಧ್ಯಸ್ಥಿಕೆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಸಾಂಸ್ಥಿಕ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಉಂಟಾಗಿರುವ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಇಂತಹ ವಿಶೇಷ ವಕೀಲ ಸಮುದಾಯದ ಅಗತ್ಯವಿದೆ ಎಂದು ನ್ಯಾಯಮೂರ್ತಿ ಕೊಹ್ಲಿ ತಿಳಿಸಿದರು.

ನ್ಯಾ. ಹಿಮಾ ಅವರ ಭಾಷಣದ ಪ್ರಮುಖ ಸಂಗತಿಗಳು

  • ಭಾರತದಲ್ಲಿ ಸಾಂಸ್ಥಿಕ ಮಧ್ಯಸ್ಥಿಕೆ ವೃದ್ಧಿಯಾಗಲು ವಿಶೇಷ ಮಧ್ಯಸ್ಥಿಕೆ ವಕೀಲ ಸಮುದಾಯವನ್ನು ಬೆಳೆಸುವ ಅಗತ್ಯವಿದೆ.

  • ಮಧ್ಯಸ್ಥಿಕೆಯಲ್ಲಿ ಮಾತ್ರ ತೊಡಗಿರುವ ತಜ್ಞರು, ಕಾನೂನು ವೃತ್ತಿಪರರು ಇರುವಂತಹ ಆ ವಕೀಲ ವರ್ಗ ಮಧ್ಯಸ್ಥಿಕೆ ಸಂಸ್ಥೆಗಳೊಂದಿಗೆ ಸಹಯೋಗ ಮತ್ತು ನಿಕಟವಾಗಿ ರೂಪುಗೊಳ್ಳಬೇಕು.

  • ಅಂತಹ ಕೇಂದ್ರೀಕೃತ ವಿಧಾನದಿಂದ ಸಾಂಪ್ರದಾಯಿಕ ನ್ಯಾಯಾಲಯದ ದಾವೆಗಳಿಗೆ ಸಮಾನವಲ್ಲದಿದ್ದರೂ ಉತ್ತಮ ಪರ್ಯಾಯವಾಗಿ ಮಧ್ಯಸ್ಥಿಕೆ ಕ್ಷೇತ್ರ ಬೆಳೆಯಲಿದೆ.

  • ಅಂತಹ ವಕೀಲ ವರ್ಗದ ವಿಕಾಸದಿಂದ ವಿಶೇಷ ಮಧ್ಯಸ್ಥಿಕೆ ನ್ಯಾಯಮಂಡಳಿಗಳು ಕಣ್ತೆರೆಯುತ್ತವೆ.

  • ಮಧ್ಯಸ್ಥಿಕೆ ತೀರ್ಪುಗಳ ಪಾವಿತ್ರ್ಯವನ್ನು ಎತ್ತಿಹಿಡಿಯಲು ಭಾರತ ಬದ್ಧವಾಗಿದೆ ಎಂದು ತೋರಿಸುವಂತಹ ಹಲವಾರು ಮಹತ್ವದ ತೀರ್ಪುಗಳು ಬಂದಿವೆ.

  • ಪರಸ್ಪರ ಉಪಯುಕ್ತ ಪರಿಹಾರಗಳನ್ನು ಕಂಡುಹಿಡಿಯಲು ಜೊತೆಗೆ ದುಬಾರಿ ಮತ್ತು ದೀರ್ಘಕಾಲದ ದಾವೆಗಳನ್ನು ತಪ್ಪಿಸಲು ಮಧ್ಯಸ್ಥಿಕೆ ಪ್ರಬಲ ಸಾಧನವಾಗಿದೆ.

  • ಮಧ್ಯಸ್ಥಿಕೆ ಕಾಯಿದೆ- 2023 ಭಾರತೀಯ ಕಾನೂನು ಕ್ಷೇತ್ರದ ಮಹತ್ವದ ಮೈಲಿಗಲ್ಲು.

ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಎಂಎಸ್ ಸೋನಕ್, ಸಿಎ ಮಹಾನಿರ್ದೇಶಕ ಅರುಣ್ ಚಾವ್ಲಾ, ಐಸಿಎ ಅಧ್ಯಕ್ಷ ಮತ್ತು ಖೈತಾನ್ ಅಂಡ್ ಕೋ ಹಿರಿಯ ಪಾಲುದಾರ ಎನ್ ಜಿ ಖೈತಾನ್, ಹಿರಿಯ ವಕೀಲೆ ಗೀತಾ ಲೂತ್ರಾ ಕಾರ್ಯಕ್ರಮದಲ್ಲಿ ಮಾತನಾಡಿದರು.