ಜಾಗತೀಕರಣಗೊಂಡ ವಿಶ್ವಕ್ಕೆ ಮಧ್ಯಸ್ಥಿಕೆ ಎಂಬುದು ಅತ್ಯುತ್ತಮ ವ್ಯಾಜ್ಯ ಪರಿಹಾರ ಕಾರ್ಯವಿಧಾನವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದರು.
ದುಬೈನಲ್ಲಿ ಇಂದು ನಡೆದ “ಜಾಗತೀಕರಣದ ಯುಗದಲ್ಲಿ ಮಧ್ಯಸ್ಥಿಕೆ” ಕುರಿತ ಅಂತರರಾಷ್ಟ್ರೀಯ ಸಮ್ಮೇಳನದ ನಾಲ್ಕನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಪ್ರಪಂಚದೆಲ್ಲೆಡೆಯ ದೇಶಗಳು ರಕ್ಷಣಾತ್ಮಕ ನಿಲುವಿನಿಂದ ಮುಕ್ತ ಆರ್ಥಿಕತೆಯತ್ತ ಹೊರಳಿವೆ” ಎಂದು ಮಾತು ಆರಂಭಿಸಿದ ಅವರು “ಪರಸ್ಪರ ನಿಕಟವಾಗಿ ಬೆಸೆದುಕೊಂಡಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದರೂ , ಸಾರ್ವಭೌಮ ರಾಷ್ಟ್ರಗಳು ಸ್ವತಂತ್ರ ಕಾನೂನು ಆಳ್ವಿಕೆಯನ್ನು ಹೊಂದಿದ್ದು ಬೌದ್ಧಿಕ ಆಸ್ತಿ ಹಕ್ಕು, ತೆರಿಗೆ ಹಾಗೂ ಕ್ರಿಪ್ಟೋಕರೆನ್ಸಿಯ ಸಮಸ್ಯೆಗಳನ್ನು ನಿಯಂತ್ರಿಸುವ ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಿವೆ” ಎಂದರು.
ಎಲ್ಲರಿಗೂ ಸ್ವೀಕಾರಾರ್ಹವಾದ ಮತ್ತು ನ್ಯಾಯಯುತವಾದ ವ್ಯಾಜ್ಯ ಪರಿಹಾರ ಕಾರ್ಯವಿಧಾನವನ್ನು ಜಾಗತೀಕರಣಗೊಂಡ ವಿಶ್ವ ಬಯಸುತ್ತದೆ. ಇಂತಹ ಸಂದರ್ಭದಲ್ಲಿ ವ್ಯಾಜ್ಯ ನಿರ್ಣಯದ ವೇಳೆ ಇಬ್ಬರೂ ಪಕ್ಷಕಾರರನ್ನು ಸಮಾನ ದೃಷ್ಟಿಯಿಂದ ನೋಡುವ ಮಧ್ಯಸ್ಥಿಕೆ ಎಂಬುದು ಅತ್ಯುತ್ತಮ ವ್ಯಾಜ್ಯ ಪರಿಹಾರ ಕಾರ್ಯವಿಧಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
“ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಎಂಬುದು ಪಕ್ಷಕಾರರಿಂದ ನಿರ್ದೇಶಿತವಾಗಿದ್ದು, ತನ್ನ ಕಾರ್ಯವಿಧಾನದಲ್ಲಿ ಹೊಂದಿಕೊಳ್ಳುವ ಗುಣ ಹೊಂದಿದೆ. ಇಲ್ಲಿ ಕ್ಷೇತ್ರ ತಜ್ಞರಿರುತ್ತಾರೆ. ಅಲ್ಲದೆ ಇದು ಕಾಲಮಿತಿಯ ಕಾರ್ಯ ವಿಧಾನವಾಗಿದ್ದು ತಕ್ಷಣ ಪರಿಹಾರ ಪಡೆಯಲು ರೂಪುಗೊಂಡಿದೆ” ಎಂದರು.
ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಏಕರೂಪತೆ ಮತ್ತು ಸ್ಥಿರತೆಯ ಪ್ರಾಮುಖ್ಯತೆಯ ಬಗ್ಗೆ ಗಮನ ಸೆಳೆದ ಅವರು, “ನ್ಯಾಯಾಲಯಗಳು ವಿದೇಶಿ ತೀರ್ಪುಗಳನ್ನು ಸ್ವಯಂಚಾಲಿತವಾಗಿ ಜಾರಿಗೊಳಿಸಲು ಅನುವಾಗುವಂತೆ 2020ರಲ್ಲಿ ಭಾರತ ಮತ್ತು ಅರಬ್ ಸಂಯುಕ್ತ ಸಂಸ್ಥಾನ ಒಪ್ಪಂದ ಮಾಡಿಕೊಂಡಿವೆ” ಎಂದರು.
"ಇಂಗ್ಲೆಂಡ್, ಸಿಂಗಪೋರ್, ಬಾಂಗ್ಲಾದೇಶ, ಮಲೇಷ್ಯಾ, ಟ್ರಿನಿಡಾಡ್, ಟೊಬಾಗೊ, ನ್ಯೂಜಿಲೆಂಡ್ ಹಾಂಕಾಂಗ್, ಮತ್ತಿತರ ದೇಶಗಳೊಂದಿಗೆ ಭಾರತ ಇದೇ ರೀತಿಯ ಒಪ್ಪಂದ ಮಾಡಿಕೊಂಡಿದೆ” ಎಂದು ಅವರು ತಿಳಿಸಿದರು.
ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಹೂಡಿಕೆದಾರ ಸ್ನೇಹಿಯಾಗಿದೆಯೇ ಅಥವಾ ಇಲ್ಲವೇ ಎಂಬ ಕುರಿತಂತೆ ಮಾತನಾಡಿದ ಸಿಜೆಐ ರಮಣ ಭಾರತೀಯ ನ್ಯಾಯಾಲಯಗಳು ಮಧ್ಯಸ್ಥಿಕೆ ಪರ ನಿಲುವಿಗೆ ಹೆಸರುವಾಸಿಯಾಗಿವೆ ಎಂದರು.
ಮಧ್ಯಸ್ಥಿಕೆ ಸಂಸ್ಕೃತಿ ಬೆಳೆಸುವುದು ಸುಲಭದ ಕೆಲಸವಲ್ಲ. ಮಧ್ಯಸ್ಥಿಕೆ ಪರ ನ್ಯಾಯಶಾಸ್ತ್ರ ಹೊಂದಿದ್ದರೆ ಸಾಲದು ಈ ನಿಟ್ಟಿನಲ್ಲಿ ನವೀನ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಪರಿಣಾಮಕಾರಿ ಮಧ್ಯಸ್ಥಿಕೆಗೆ ಸಿಜೆಐ ನೀಡಿರುವ ಸಲಹೆಗಳು:
1) ನ್ಯಾಯಾಂಗ ಮಧ್ಯಪ್ರವೇಶದ ವ್ಯಾಪ್ತಿಯನ್ನು ಕಡಿಮೆ ಮಾಡಬೇಕಾಗಿದೆ.
2) ಮಧ್ಯಸ್ಥಿಕೆ ಪೂರ್ಣಗೊಳಿಸುವ ಸಮಯಾವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
3) ತೀರ್ಪು ಜಾರಿಯಾಗುವಂತೆ ನೋಡಿಕೊಳ್ಳಬೇಕು.
4) ಪಕ್ಷಕಾರರ ಸ್ವಾಯತ್ತತೆಯನ್ನು ಗೌರವಿಸಬೇಕು.
5) ಮಧ್ಯಸ್ಥಿಕೆ ಶುಲ್ಕ ನಿಯಂತ್ರಿಸಲು ಕಾರ್ಯವಿಧಾನ ಅಗತ್ಯ.
6) ತೀರ್ಪನ್ನು ಪ್ರಶ್ನಿಸುವ ವೇದಿಕೆಗಳು ಸೀಮಿತವಾಗಿರಬೇಕು.
7) ತೀರ್ಪುಗಳಿಗೆ ತಡೆ ನೀಡುವುದು ವಾಡಿಕೆಯಾಗಬಾರದು.
8) ತುರ್ತು ತೀರ್ಪುಗಳನ್ನು ಗುರುತಿಸಬೇಕು.
9) ಸಾಂಸ್ಥಿಕ ಮಧ್ಯಸ್ಥಿಕೆಯ ಮೇಲೆ ಕೇಂದ್ರೀಕರಣ.
10) ಹೆಚ್ಚು ಹೆಚ್ಚು ಮಧ್ಯಸ್ಥಿಕೆ ಕೇಂದ್ರಗಳ ಸ್ಥಾಪನೆ.
11) ಪ್ರಖ್ಯಾತ ಪ್ಯಾನೆಲಿಸ್ಟ್‌ಗಳನ್ನು ಆಕರ್ಷಿಸಲು ಸಾಂಸ್ಥಿಕ ಕಾರ್ಯವಿಧಾನ.
12) ಹೊಸ ತಂತ್ರಜ್ಞಾನದ ಬಳಕೆ.
13) ಮಧ್ಯಸ್ಥಗಾರನ ತಾಂತ್ರಿಕ ಜ್ಞಾನಕ್ಕೆ ಸೂಕ್ತ ಪ್ರಾಮುಖ್ಯತೆ ನೀಡಬೇಕು.
14) ದೃಢ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.