Justice Sanjib Banerjee 
ಸುದ್ದಿಗಳು

ಭಾರತದಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ಮಧ್ಯಸ್ಥಿಕೆ ತುತ್ತಾಗಿದೆ: ನ್ಯಾ. ಸಂಜೀಬ್ ಬ್ಯಾನರ್ಜಿ ಆತಂಕ

ಮಧ್ಯಸ್ಥಿಕೆ ಕುರಿತಂತೆ ತಾನು ನೀಡಿದ್ದ ಹಲವು ತೀರ್ಪುಗಳನ್ನು ಸುಪ್ರೀಂ ಕೋರ್ಟ್ ತಿದ್ದಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

Bar & Bench

ಭಾರತದಲ್ಲಿ ಮಧ್ಯಸ್ಥಿಕೆ ಎಂಬುದು ವ್ಯಾಪಕ ಭ್ರಷ್ಟಾಚಾರಕ್ಕೆ ತುತ್ತಾಗಿದೆ ಎಂದು ಮದ್ರಾಸ್ ಮತ್ತು ಮೇಘಾಲಯ ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಆತಂಕ ವ್ಯಕ್ತಪಡಿಸಿದರು.

ಹಿರಿಯ ನ್ಯಾಯವಾದಿ ಎಂ ಶ್ರೀಚರಣ್ ರಂಗರಾಜನ್ ಅವರು ರಚಿಸಿರುವ ‘ಆರ್ಬಿಟ್ರೇಷನ್ ಲಾ ಅಂಡ್ ಪ್ರಾಕ್ಟೀಸ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲ್ಕತ್ತಾ ಹೈಕೋರ್ಟ್‌ನಲ್ಲಿ ತಾವು ನ್ಯಾಯಮೂರ್ತಿಯಾಗಿದ್ದಾಗ ಮಧ್ಯಸ್ಥಿಕೆ ಕಾಯಿದೆಗಳನ್ನು ದುರುಪಯೋಗ ಮಾಡಿಕೊಂಡಿರುವುದನ್ನು ಕಂಡಿದ್ದೇನೆ ಎಂದ ಅವರು ಗುತ್ತಿಗೆದಾರರು ಮತ್ತು ಸರ್ಕಾರಿ ನೌಕರರ ಸಹಕಾರದೊಂದಿಗೆ ಹಣಕಾಸು ಕಂಪನಿಗಳು ತಮಗೆ ಬೇಕಾದ ಮಧ್ಯಸ್ಥಿಕೆದಾರರನ್ನು ಆಗಾಗ್ಗೆ ಆಯ್ದುಕೊಳ್ಳುತ್ತವೆ ಎಂಬುದಾಗಿ ತಿಳಿಸಿದರು. ಈ ಮಧ್ಯಸ್ಥಿಕೆದಾರರು ಉಲ್ಲೇಖದ ಮೇಲೆ ಉಲ್ಲೇಖಗಳನ್ನು ತೆಗೆದುಕೊಂಡು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಮೂಲ ಪರಿಹಾರಕ್ಕಿಂತಲೂ ದೊಡ್ಡ ಮೊತ್ತದ ಪರಿಹಾರ ನಿಗದಿಪಡಿಸುತ್ತಾರೆ” ಎಂದು ಆರೋಪಿಸಿದರು.

ನಿರ್ದಿಷ್ಟವಾಗಿ ಭಾರತದಲ್ಲಿ ಮಧ್ಯಸ್ಥಿಕೆ ಕಾನೂನು ಅಂಬೆಗಾಲಿಡುತ್ತಿದ್ದು ಅನೇಕ ಸುಧಾರಣೆಗಳನ್ನು ತರಬೇಕಿದೆ. ಸುಪ್ರೀಂ ಕೋರ್ಟ್ ರೂಪಿಸಿದ ಕಾನೂನನ್ನು ಎಲ್ಲರೂ ಪಾಲಿಸಬೇಕಿರುವುದರಿಂದ ಮಧ್ಯಸ್ಥಿಕೆ ಕುರಿತಂತೆ ತಾನು ನೀಡಿದ್ದ ಹಲವು ತೀರ್ಪುಗಳನ್ನು ಸುಪ್ರೀಂ ಕೋರ್ಟ್ ತಿದ್ದಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಅವರು ನುಡಿದರು.

ಹಿರಿಯ ವಕೀಲರಾದ  ರಂಗರಾಜನ್ ಅವರ ಪುಸ್ತಕ ಭಾರತದಲ್ಲಿನ ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ವ್ಯವಹರಿಸಲಿದ್ದು ಪ್ರತಿಯೊಬ್ಬ ಮಧ್ಯಸ್ಥಗಾರರೂ ಓದಲೇಬೇಕಾದ ಪುಸ್ತಕ ಇದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Treatise on Arbitration book launch

ರಂಗರಾಜನ್ ಅವರನ್ನು ಈ ವರ್ಷದ ಜನವರಿಯಲ್ಲಿ ಮದ್ರಾಸ್ ಹೈಕೋರ್ಟ್ ಹಿರಿಯ ವಕೀಲರನ್ನಾಗಿ ನೇಮಿಸಿತ್ತು. ತಮಿಳುನಾಡಿನಲ್ಲಿ ಎಐಎಡಿಎಂಕೆ ಆಡಳಿತದ ಅವಧಿಯಲ್ಲಿ ಅವರು ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಕೆ ವಿ ವಿಶ್ವನಾಥನ್, ಮದ್ರಾಸ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ವಿ ಗಂಗಾಪುರವಾಲಾ,  ನ್ಯಾಯಮೂರ್ತಿಗಳಾದ ಅನಿತಾ ಸುಮಂತ್, ಭರತ ಚಕ್ರವರ್ತಿ, ಆರ್ ಮಹದೇವನ್, ಸೆಂಥಿಲ್ ಕುಮಾರ್ ರಾಮಮೂರ್ತಿ, ಎಸ್ ವೈದ್ಯನಾಥನ್, ಮೊಹಮ್ಮದ್ ಶಫೀಕ್, ನಿವೃತ್ತ ನ್ಯಾಯಮೂರ್ತಿ   ವಿ ಪಾರ್ತಿಬನ್ ಹಾಗೂ ಹಿರಿಯ ವಕೀಲರಾದ ವಿಜಯ್ ನಾರಾಯಣ ಮತ್ತು ಅರವಿಂದ್ ಪಾಂಡಿಯನ್ ಮತ್ತಿತರರು ಉಪಸ್ಥಿತರಿದ್ದರು.