ವಿವಿಧ ನ್ಯಾಯಾಲಯಗಳು ಜಾಮೀನು ನೀಡಿದ ಬಳಿಕವೂ ಆರೋಪಿಯೊಬ್ಬರ ವಿರುದ್ಧ ವಿದೇಶಕ್ಕೆ ತೆರಳದಂತೆ ಲುಕೌಟ್ ನೋಟಿಸ್ ಜಾರಿ ಮಾಡಿದ್ದಕ್ಕಾಗಿ ಬಾಂಬೆ ಹೈಕೋರ್ಟ್ ಬುಧವಾರ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಛೀಮಾರಿ ಹಾಕಿದೆ.
ಸುಪ್ರೀಂ ಕೋರ್ಟ್‌ನಿಂದೇ ಜಾಮೀನಿನ ಮೇಲೆ ಆರೋಪಿ ಬಿಡುಗಡೆಯಾಗಿರುವಾಗ ಯಾವ ಕಾನೂನಿನಡಿ ಆರೋಪಿಗೆ ಎಲ್‌ಒಸಿ ಜಾರಿ ಮಾಡಲಾಯಿತು ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಪರ ವಕೀಲರನ್ನು ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಮಿಲಿಂದ್ ಜಾಧವ್ ಅವರಿದ್ದ ವಿಭಾಗೀಯ ಪೀಠ ಪ್ರಶ್ನಿಸಿತು.
ಒಮ್ಮೆ ಜಾಮೀನು ಮಂಜೂರಾದ ಬಳಿಕ ಆರೋಪಿ ಜಾಮೀನು ನೀಡಿದ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತಾನೆ. ತನಿಖಾ ಸಂಸ್ಥೆಗಳಯು ಹೇಗೆ ಇವುಗಳನ್ನು ರದ್ದುಗೊಳಿಸಬಹುದು. ತನಿಖಾ ಸಂಸ್ಥೆಗಳೇನು ಸಂಸತ್ತಿಗಿಂತಲೂ ಮೇಲಿವೆಯೇ? ಅವು ಸಂಸತ್ತನ್ನು ಅತಿಕ್ರಮಿಸಲು ಹೊರಟಿವೆಯೇ ಎಂದು ನ್ಯಾಯಾಲಯ ಕೇಳಿತು.
ಸಿಬಿಐ ನಿದರ್ಶನದಲ್ಲಿ ಗೃಹ ಸಚಿವಾಲಯ ತನ್ನ ವಿರುದ್ಧ ಹೊರಡಿಸಿದ ಲುಕ್ ಔಟ್ ಸುತ್ತೋಲೆಗಳನ್ನು ಪ್ರಶ್ನಿಸಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪುತ್ರಿ ರೋಶಿನಿ ಕಪೂರ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ದಿವಾನ್ ಹೌಸಿಂಗ್ ಫೈನಾನ್ಶಿಯಲ್ ಲಿಮಿಟೆಡ್‌ಗೆ (DHFL) ಮೋಸದಿಂದ ಹಣಕಾಸಿನ ನೆರವು ನೀಡಿ ಅದಕ್ಕೆ ಬದಲಾಗಿ ಅನಗತ್ಯ ಪ್ರಯೋಜನಗಳನ್ನು ಪಡೆಯಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಕಪೂರ್ ಅವರನ್ನು ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿವೆ.