ಎನ್‌ಕೌಂಟರ್‌ಗಳನ್ನು ನಡೆಸುವ ಮೂಲಕ ರಾಜ್ಯ ಪೊಲೀಸರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂದು ಅಸ್ಸಾಂ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ [ಆರಿಫ್ ಯೇಸಿನ್ ಜ್ವಾಡ್ಡರ್ ಮತ್ತು ಅಸ್ಸಾಂ ಸರ್ಕಾರ ನಡುವಣ ಪ್ರಕರಣ].
ನಕಲಿ ಎನ್‌ಕೌಂಟರ್ ಪ್ರಕರಣಗಳ ಬಗ್ಗೆ ಪೊಲೀಸರು ನಿಧಾನಗತಿಯ ತನಿಖೆ ನಡೆಸುತ್ತಿರುವ ಕುರಿತಂತೆಯೂ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ರಾಜ್ಯದ ವಕೀಲರನ್ನು ಕೇಳಿತು.
"ಪೊಲೀಸ್ ಸಿಬ್ಬಂದಿ ಸಮುದಾಯವೊಂದನ್ನು ಗುರಿಯಾಗಿಸಿಕೊಂಡಿದ್ದಾರೆಯೇ? ತಮ್ಮ ಕರ್ತವ್ಯಕ್ಕೆ ಸಂಬಂಧಿಸಿದಂತೆ ಎಲ್ಲೆ ಮೀರಿ ನಡೆಯುತ್ತಿದ್ದಾರೆಯೇ? ಈ ರೀತಿಯ ಅರ್ಜಿಗಳನ್ನು ಅಕಾಲಿಕ ಸ್ವರೂಪದ್ದೆಂದು ಹೇಳಿ ವಜಾಗೊಳಿಸಲಾಗದು... ಮ್ಯಾಜಿಸ್ಟ್ರೇಟ್ ವಿಚಾರಣೆ ಇಲ್ಲಿಯವರೆಗೆ ನಡೆಯಬಾರದು. ಹೆಚ್ಚೆಂದರೆ 10 ಅಥವಾ 15 ದಿನ ಸಾಕು. ಈ ಘಟನೆಗಳು 2021 ಮತ್ತು 2022ರಲ್ಲಿ ನಡೆದಿವೆ. ಇದು ನಿಷ್ಪ್ರಯೋಜಕವಾಗಲಿದೆ” ಎಂದು ಅಸ್ಸಾಂ ಮೂಲದವರೇ ಆದ ನ್ಯಾಯಮೂರ್ತಿ ಭುಯಾನ್ ಹೇಳಿದರು.
ನಕಲಿ ಎನ್‌ಕೌಂಟರ್ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಹಳ ಸಮಸ್ಯಾತ್ಮಕ ಇತಿಹಾಸ ಇದೆ ಎಂದು ಕೂಡ ಪೀಠ ಹೇಳಿದೆ.
"ಏನೇ ಇರಲಿ, ಎನ್‌ಕೌಂಟರ್ ಆಗಿಲ್ಲ ಎಂದು ಹೇಳಲಾಗದು. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಹಳ ಸಮಸ್ಯಾತ್ಮಕ ಹಿನ್ನೆಲೆ ಇದೆ. ವರದಿಗಳೂ ಇವೆ. ನೀವದನ್ನು ಅಲ್ಲಗಳೆಯಲಾಗದು” ಎಂದು ನ್ಯಾಯಾಲಯ ಹೇಳಿತು.
ಪೊಲೀಸ್ ಸಿಬ್ಬಂದಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆಯೇ? ತಮ್ಮ ಕರ್ತವ್ಯಕ್ಕೆ ಸಂಬಂಧಿಸಿದಂತೆ ಎಲ್ಲೆ ಮೀರಿ ನಡೆಯುತ್ತಿದ್ದಾರೆಯೇ?ಸುಪ್ರೀಂ ಕೋರ್ಟ್
ಅಸ್ಸಾಂನಲ್ಲಿ ನಡೆದ ನಕಲಿ ಎನ್‌ಕೌಂಟರ್‌ಗಳು ಮತ್ತು ಆ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆಗಳನ್ನು ಕೇಳಿತು. ಅಸ್ಸಾಂನಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸಲು ಗುವಾಹಟಿ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರಾದ ವಕೀಲ ಆರಿಫ್ ಯೆಸಿನ್ ಜ್ವಾಡ್ಡರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಮೇ 2021 ರಿಂದ ರಾಜ್ಯದಲ್ಲಿ 80ಕ್ಕೂ ಹೆಚ್ಚು ಪೊಲೀಸ್ ಎನ್‌ಕೌಂಟರ್‌ಗಳು ನಡೆದಿವೆ ಎಂದು ಅರ್ಜಿ ಆತಂಕ ವ್ಯಕ್ತಪಡಿಸಿತ್ತು.
ಕಳೆದ ಹತ್ತು ವರ್ಷಗಳಲ್ಲಿ ಕೇವಲ ಶೇ.10ರಷ್ಟು ಅಪರಾಧಿಗಳು ಮಾತ್ರ ಪೊಲೀಸ್ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದು ಆತ್ಮರಕ್ಷಣೆಗಾಗಿ ಪೊಲೀಸರು ಈ ಕ್ರಮ ಕೈಗೊಂಡಿದ್ದರು ಎಂದು ಅಸ್ಸಾಂ ಸರ್ಕಾರ ಈ ಹಿಂದೆ ವಾದಿಸಿತ್ತು .
ಇಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಅಸ್ಸಾಂ ಪೊಲೀಸರ ವಿರುದ್ಧ ಕೇಳಿಬಂದಿರುವ ಎನ್‌ಕೌಂಟರ್ ಆರೋಪಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಹೆಚ್ಚು ತೊಡಗಿಕೊಳ್ಳಬೇಕು. ದೂರುಗಳನ್ನು ಮುಚ್ಚಿಹಾಕದೆ ಕ್ರಮ ಕೈಗೊಳ್ಳಬೇಕು ಎಂದಿತು.
ಅಸ್ಸಾಂ ರಾಜ್ಯವು 171 ಎನ್‌ಕೌಂಟರ್ ಪ್ರಕರಣಗಳ ವಿವರಗಳನ್ನು ಮತ್ತು ಆ ಪ್ರಕರಣಗಳಲ್ಲಿ ಮಾಡಿದ ತನಿಖೆಯ ವಿವರಗಳನ್ನು ನೀಡುವಂತೆ ಸೂಚಿಸಿದ ಅದು ನವೆಂಬರ್ 26 ಕ್ಕೆ ಪ್ರಕರಣ ಮುಂದೂಡಿತು.
ಜ್ವಾಡ್ಡರ್ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು. ಅಸ್ಸಾಂ ಸರ್ಕಾರವನ್ನು ಹಿರಿಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಳಿನ್ ಕೊಹ್ಲಿ ಪ್ರತಿನಿಧಿಸಿದ್ದರು.