“ಬಿಜೆಪಿಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಿ ಎನ್ ಜೀವರಾಜ್ ಮತಪತ್ರ ತಿದ್ದಲು ತಿದ್ದಲು ಸಾಧ್ಯ? ಚುನಾವಣಾ ಆಯೋಗವು ಹಾಕಿದ್ದ ಬೀಗವನ್ನು ಒಡೆದು ಮತಗಳನ್ನು ತಿದ್ದುಪಡಿ ಮಾಡಿ ಬಂದರೇ? ಅಂದರೆ ಚುನಾವಣಾ ಆಯೋಗದ ಭದ್ರತೆಯು ಉಪಯೋಗವಿಲ್ಲ (ಯೂಸ್ ಲೆಸ್) ಎನ್ನುತ್ತೀರಾ?” ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ದೂರುದಾರರನ್ನು ಮೌಖಿಕವಾಗಿ ಪ್ರಶ್ನಿಸಿತು.
ಅಂಚೆ ಮತಗಳ ಮರು ಎಣಿಕೆ ವೇಳೆ ಮತಪತ್ರಗಳನ್ನು ತಿರುಚಿದ ಆರೋಪ ಸಂಬಂಧ ಕಾಂಗ್ರೆಸ್ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ನೀಡಿದ ದೂರು ಆಧರಿಸಿ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಕೋರಿ ಡಿ ಎನ್ ಜೀವರಾಜ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಈ ವೇಳೆ ಅರ್ಜಿ ಪರಿಶೀಲಿಸಿದ ಪೀಠವು ಅರ್ಜಿದಾರರ ಮೇಲಿನ ಆರೋಪವೇನು? ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿತು.
ದೂರುದಾರರ ಪರ ವಕೀಲರು, “ಮತಪತ್ರಗಳನ್ನು ತಿರುಚಲಾಗಿದೆ” ಎಂದರು. ಆಗ ಪೀಠವು “ಮತದಾನದ ಬಳಿಕ ಮತಪತ್ರಗಳು ಯಾರ ವಶದಲ್ಲಿತ್ತು?” ಕೇಳಿತು. ದೂರುದಾರರ ಪರ ವಕೀಲರು ಚುನಾವಣಾ ಆಯೋಗದ ವಶದಲ್ಲಿ ಎಂದರು.
ಅದಕ್ಕೆ ಪೀಠವು “ಮತಪತ್ರ ಚುನಾವಣಾ ಆಯೋಗದ ವಶದಲ್ಲಿರಬೇಕಾದರೆ, ಅವುಗಳನ್ನ ಜೀವರಾಜ್ ಹೇಗೆ ತಿದ್ದಲು ಸಾಧ್ಯ? ಚುನಾವಣಾ ಆಯೋಗವು ಹಾಕಿದ್ದ ಬೀಗವನ್ನು ಒಡೆದು ಮತಗಳನ್ನು ತಿದ್ದುಪಡಿ ಮಾಡಿ ಬಂದರೇ? ಅಂದರೆ ಚುನಾವಣಾ ಆಯೋಗದ ಭದ್ರತೆಯು ಉಪಯೋಗವಿಲ್ಲ (ಯೂಸ್ ಲೆಸ್) ಎನ್ನುತ್ತೀರಾ?” ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿತು.
ನಂತರ ಅರ್ಜಿದಾರರ ವಿರುದ್ಧದ ಎಫ್ಐಆರ್‌ಗೆ ನೀಡಿರುವ ಮಧ್ಯಂತರ ತಡೆಯನ್ನು ಜುಲೈ 3ರವರೆಗೆ ವಿಸ್ತರಿಸಿ ವಿಚಾರಣೆ ಮುಂದೂಡಿತು.
2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 1,811 ಅಂಚೆ ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್‌ನ ರಾಜೇಗೌಡ ಅವರು 201 ಮತಗಳಿಂದ ವಿಜೇತರಾಗಿದ್ದರು. ಕಾಂಗ್ರೆಸ್‌ನ ಟಿ ಡಿ ರಾಜೇಗೌಡರ ಆಯ್ಕೆ ಪ್ರಶ್ನಿಸಿ ಜೀವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ , ತಿರಸ್ಕೃತವಾಗಿರುವ 279 ಅಂಚೆ ಮತಗಳನ್ನು ಪರಿಶೀಲಿಸಿ ವಿಜೇತರನ್ನು ಘೋಷಿಸುವಂತೆ 2026ರ ಏಪ್ರಿಲ್ 6ರಂದು ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ 2026ರ ಮೇ 3ರಂದು ಚುನಾವಣಾಧಿಕಾರಿ ನ್ಯಾಯಾಲಯದ ನಿರ್ದೇಶನದ ಅನುಸಾರ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಕಾಂಗ್ರೆಸ್ ಟಿ ಡಿ ರಾಜೇಗೌಡ ವಿರುದ್ಧ ಜೀವರಾಜ್ ವಿಜೇತರು ಎಂದು ಫಾರ್ಮ್ 21C ಪತ್ರ ನೀಡಿದ್ದರು.
ಈ ಮಧ್ಯೆ 2026ರ ಮೇ 3ರಂದು ಮತ ಎಣಿಕೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ನ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿ, 2023ರ ಮೇ 13ರಂದು ಮತ ಎಣಿಕೆ ಮುಗಿದ ಬಳಿಕ ದೇವರಾಜ್, ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಚಿಕ್ಕಮಗಳೂರಿನ ಅಂದಿನ ಜಿಲ್ಲಾಧಿಕಾರಿ ರಮೇಶ್ ಅವರು ಸಂಚು ರೂಪಿಸಿ ಮತ ಪೆಟ್ಟಿಗೆಗಳ ಸೀಲು ತೆಗೆದು ರಾಜೇಗೌಡರಿಗೆ ಬಿದ್ದಿದ್ದ ಒಂದು ಕಟ್ಟಿನ 170 ಮತಗಳನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.
ಈ ದೂರಿನನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143 (ಅಕ್ರಮ ಕೂಟ), 465 (ಸುಳ್ಳು ದಾಖಲೆ ಸೃಷ್ಟಿ), 468 (ವಂಚಿಸಲು ಸುಳ್ಳು ದಾಖಲೆ ಸೃಷ್ಟಿ), 471 (ಸುಳ್ಳು ದಾಖಲೆಗಳನ್ನು ಅಸಲಿ ಎಂದು ಬಿಂಬಿಸುವುದು), 120B (ಪಿತೂರಿ), 149 (ಸಮಾನ ಉದ್ದೇಶ) ಜೊತೆಗೆ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 136ರ (ಚುನಾವಣಾ ಅಕ್ರಮ) ಅಡಿ ಪ್ರಕರಣ ದಾಖಲಿಸಲಾಗಿದೆ.