Shyam Divan 
ಸುದ್ದಿಗಳು

ಪಿಎಂ ಕೇರ್ಸ್ ನಿಧಿ ಪ್ರಕರಣವನ್ನು 4 ಪೀಠಗಳೆದುರು ವಾದಿಸಿದ್ದೇನೆ: ದೀರ್ಘಾವಧಿ ವಿಚಾರಣೆ ಬಗ್ಗೆ ಶ್ಯಾಮ್ ದಿವಾನ್ ಬೇಸರ

ಪ್ರಕರಣವನ್ನು ಸೆ. 15ಕ್ಕೆ ಮುಂದೂಡಿದ್ದು ಆ ಬಳಿಕ ಅದನ್ನು ಸಿಜೆ ಶರ್ಮಾ ಮತ್ತು ನ್ಯಾ. ಸುಬ್ರಮೊಣಿಯಂ ಪ್ರಸಾದ್ ಅವರಿರುವ ಪೀಠವೇ ಮತ್ತೆ ವಿಚಾರಣೆ ನಡೆಸಲಿದೆ. ಹೀಗಾಗಿ ವಿಚಾರಣೆ ಸುದೀರ್ಘವಾಗುತ್ತಿರುವುದನ್ನು ದಿವಾನ್ ಪ್ರಸ್ತಾಪಿಸಿದರು.

Bar & Bench

ಪ್ರಧಾನ ಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳ ನಿಧಿಯನ್ನು (ಪಿಎಂ ಕೇರ್ಸ್‌ ನಿಧಿ) 'ಪ್ರಭುತ್ವ'ದ ಅಡಿ ಸೇರಿಸುವಂತೆ ( ಭಾರತ ಸರ್ಕಾರದ ನಿಧಿ ಎಂದು ಘೋಷಿಸುವಂತೆ) ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ನಾಲ್ಕು ಬೇರೆ ಬೇರೆ ಪೀಠಗಳೆದುರು ವಾದಿಸಿದ್ದರೂ ಪ್ರಕರಣ ಇತ್ಯರ್ಥಗೊಂಡಿಲ್ಲ ಎಂದು ಹಿರಿಯ ವಕೀಲ ಶ್ಯಾಮ್ ದಿವಾನ್ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದರು.

ಪ್ರಕರಣವನ್ನು ಸೆಪ್ಟೆಂಬರ್ 15 ಕ್ಕೆ ಮುಂದೂಡಿದ್ದು ಆ ಬಳಿಕ ಅದನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿರುವ ಪೀಠ ವಿಚಾರಣೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ದಿವಾನ್‌ ವಿಚಾರಣೆ ಸುದೀರ್ಘವಾಗುತ್ತಿರುವುದನ್ನು ಪ್ರಸ್ತಾಪಿಸಿದರು.

“ನಾನು ಈ ಪ್ರಕರಣವನ್ನು ನಾಲ್ಕು ಪೀಠಗಳೆದುರು ವಾದಿಸಿದ್ದು ಇದು ಮುಕ್ತಾಯವಾಗುತ್ತಲೇ ಇಲ್ಲ” ಎಂದು ಅವರು ವಿಚಾರಣೆ ವೇಳೆ ಹೇಳಿದರು.  

ದಿವಾನ್ ಅವರು ಮುಖ್ಯ ನ್ಯಾಯಮೂರ್ತಿ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ಪೀಠದೆದುರು ಜನವರಿ 31, 2023ರಂದು ವಾದ ಮುಕ್ತಾಯಗೊಳಿಸಿದ್ದರು. ಆದರೆ ಬೇಸಿಗೆ ರಜೆ ಬಳಿಕ ರೋಸ್ಟರ್‌ ಬದಲಾಗಿದ್ದು ಮುಖ್ಯ ನ್ಯಾಯಮೂರ್ತಿಗಳು ಈಗ ನ್ಯಾ. ಸಂಜೀವ್‌ ನರೋಲಾ ಅವರೊಂದಿಗೆ ಪ್ರಕರಣ ಆಲಿಸುತ್ತಿದ್ದಾರೆ.

ಪ್ರಕರಣವನ್ನು ಇಂದು ವಿಚಾರಣೆಗಾಗಿ ಕೈಗೆತ್ತಿಕೊಂಡಾಗ “ಈ ಹಿಂದಿನ ಪೀಠ ಇದನ್ನು ಭಾಗಶಃ ಆಲಿಸಿದೆ ಎಂದು ಸೂಚಿಸಲಾಯಿತು. ಹೀಗಾಗಿ ನ್ಯಾಯಾಲಯ ವಿಚಾರಣೆಯನ್ನು ಸೆ.15ಕ್ಕೆ ಮುಂದೂಡಿತು.

ಸಮ್ಯಕ್ ಗಂಗ್ವಾಲ್ ಎಂಬುವವರು 2020 ಮತ್ತು 2021ರಲ್ಲಿ ಸಲ್ಲಿಸಿದ್ದ ಎರಡು ಪ್ರಕರಣಗಳ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಅವುಗಳಲ್ಲಿ ಒಂದು ಪಿಎಂ ಕೇರ್ಸ್ ನಿಧಿಯನ್ನು ಸಂವಿಧಾನದ 12ನೇ ವಿಧಿಯಡಿ 'ಪ್ರಭುತ್ವ'ದ ವ್ಯಾಪ್ತಿಗೆ ಸೇರಿಸಬೇಕು ಎಂದು ಕೋರಿದ್ದರೆ ಮತ್ತೊಂದು ಅರ್ಜಿ, ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆ ಅಡಿಯಲ್ಲಿ ನಿಧಿಯು 'ಸಾರ್ವಜನಿಕ ಪ್ರಾಧಿಕಾರ'ವಾಗಿದೆ ಎಂದು ಘೋಷಿಸುವಂತೆ ಪ್ರಾರ್ಥಿಸಿತ್ತು.

ದಿವಾನ್‌ ಅವರು ನ್ಯಾ. ಪ್ರತಿಭಾ ಪಾಟೀಲ್‌, ನಂತರ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಅವರೆದುರು ಎರಡು ಬಾರಿ, ಇನ್ನೊಮ್ಮೆ ಸಿಜೆ ಡಿ ಎನ್‌ ಪಟೇಲ್‌ ಮತ್ತು ನ್ಯಾ. ಜ್ಯೋತಿ ಸಿಂಗ್‌ ಅವರಿದ್ದ ಪೀಠದೆದುರು, ಬಳಿಕ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಪೀಠದೆದುರು ವಾದ ಮಂಡಿಸಿದ್ದರು. ತದನಂತರ ಮುಖ್ಯ ನ್ಯಾಯಮೂರ್ತಿ ಶರ್ಮಾ ಮತ್ತು ನ್ಯಾ. ಸುಬ್ರಮೊಣಿಯಂ ಪ್ರಸಾದ್‌ ಅವರಿದ್ದ ಪೀಠದೆದುರು ವಾದಿಸಿದರು. ಆ ಬಳಿಕ ರೋಸ್ಟರ್‌ ಬದಲಾಗಿ ಈಗ ಸಿಜೆ ಶರ್ಮಾ ಮತ್ತು  ನ್ಯಾ,. ಸಂಜೀವ್‌ ನರೋಲಾ ಪ್ರಕರಣವನ್ನು ಆಲಿಸುತ್ತಿದ್ದು ಸೆ. 15ರ ಬಳಿಕ ಮತ್ತೆ ಶರ್ಮಾ ಮತ್ತು ನ್ಯಾ. ಸುಬ್ರಮೊಣಿಯಂ ಪ್ರಸಾದ್‌ ಅವರಿರುವ ಪೀಠ ವಿಚಾರಣೆ ನಡೆಸಲಿದೆ.