ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನೇತೃತ್ವದ ನೂತನ ಕೇಂದ್ರ ಸರ್ಕಾರದಲ್ಲಿ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವರಾಗಿ ಬಿಜೆಪಿ ನಾಯಕ ಅರ್ಜುನ್ ರಾಮ್ ಮೇಘವಾಲ್ ಅವರು ಮುಂದುವರೆಯಲಿದ್ದು ಸ್ವತಂತ್ರ ಖಾತೆಯಾಗಿ ಕಾನೂನು ಸಚಿವಾಲಯವನ್ನು ನಿರ್ವಹಿಸಲಿದ್ದಾರೆ. ಈ ಕುರಿತಂತೆ ರಾಷ್ಟ್ರಪತಿಗಳು ಸೋಮವಾರ ಪ್ರಕಟಣೆ ಹೊರಡಿಸಿದ್ದಾರೆ.
ಜೂನ್ 9 ರಂದು, ಮೇಘವಾಲ್ ಅವರು ಬಿಜೆಪಿ ನೇತೃತ್ವದ ಹೊಸ ಚುನಾಯಿತ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಪ್ರಮಾಣ ವಚನ ಸ್ವೀಕರಿಸಿದರು.
ಈ ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಭೂ ಮತ್ತು ವಿಜ್ಞಾನ ಸಚಿವಾಲಯದ ಖಾತೆ ವಹಿಸಿ ಮೇಘವಾಲ್ ಅವರಿಗೆ ಕಾನೂನು ಖಾತೆ ವಹಿಸಲಾಗಿತ್ತು.
ಕಳೆದ ವರ್ಷ, ಮೇ 18 ರಂದು, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇಘವಾಲ್ ಅವರಿಗೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮತ್ತು ಸಂಸ್ಕೃತಿ ಖಾತೆಯ ಜೊತೆಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರಾಗಿ ಸ್ವತಂತ್ರ ಉಸ್ತುವಾರಿ ವಹಿಸಿದ್ದರು
ನಿವೃತ್ತ ಐಎಎಸ್ ಅಧಿಕಾರಿಯಾಗಿರುವ 69 ವರ್ಷದ ಮೇಘವಾಲ್ ಅವರು ರಾಜಸ್ಥಾನದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಪ್ರಧಾನಿ ಮೋದಿ ಅವರ ಮೊದಲ ಅಧಿಕಾರಾವಧಿಯಲ್ಲಿ (2014- 2019) ಸಂಸದೀಯ ವ್ಯವಹಾರ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಕಳೆದ ಒಂದು ದಶಕದಿಂದ ಬಿಜೆಪಿಯ ಸದಸ್ಯರಾಗಿದ್ದಾರೆ.
ಬಿಕಾನೇರ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿ 2009ರಲ್ಲಿ ಮೇಘವಾಲ್ ಮೊದಲ ಬಾರಿಗೆ ಚುನಾಯಿತರಾದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮರು ಆಯ್ಕೆಯಾದರು. ಎರಡನೇ ಅವಧಿಯಲ್ಲಿ ಸಂಸದರಾಗಿದ್ದಾಗ ಲೋಕಸಭೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದರು.