Arnab inside police van 2 
ಸುದ್ದಿಗಳು

ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಬಂಧನ: ಇಲ್ಲಿದೆ ಪ್ರಕರಣದ ಹಿನ್ನೆಲೆ

ಗೃಹ ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯಕ್‌ ಮತ್ತು ಅವರ ತಾಯಿ ಕುಮುದಾ ನಾಯಕ್‌ ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಅರ್ನಾಬ್ ಮೇಲಿದೆ. 2018ರಲ್ಲಿ ನಡೆದಿದ್ದ ಪ್ರಕರಣ ಇದಾಗಿದ್ದು, ತನಿಖೆಗಾಗಿ ಸಂತ್ರಸ್ತ ಕುಟುಂಬ ಆಗ್ರಹಿಸಿತ್ತು.

Bar & Bench

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಗ್ಲ ರಾಷ್ಟ್ರೀಯ ಸುದ್ದಿ ವಾಹಿನಿ ರಿಪಬ್ಲಿಕ್ ಟಿವಿಯ ನಿರೂಪಕ, ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರನ್ನು ಬಂಧಿಸಲಾಗಿದೆ. ರಿಪಬ್ಲಿಕ್‌ ಟಿವಿ ಟಿವಿ ಸ್ಟೂಡಿಯೋ ವಿನ್ಯಾಸಗೊಳಿಸಿದ್ದ ವಾಸ್ತು ವಿನ್ಯಾಸಕಾರನ ಸಾವಿನಲ್ಲಿ ಅರ್ನಾಬ್‌ ಪಾತ್ರದ ಕುರಿತು ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ.

ಗೃಹ ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯಕ್‌ ಮತ್ತು ಅವರ ತಾಯಿ ಕುಮುದಾ ನಾಯಕ್‌ ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ, 2018ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರನ್ನು ರಾಯಗಢ ಪೊಲೀಸರು, ಮುಂಬೈ ಪೊಲೀಸರ ಸಹಕಾರದೊಂದಿಗೆ ಬಂಧಿಸಿದ್ದಾರೆ. ಅರ್ನಾಬ್‌ ಅವರ ಮುಂಬೈನ ನಿವಾಸ ವೊರ್ಲಿಯಲ್ಲಿ ಅವರನ್ನು ಬುಧವಾರ ಬೆಳಗ್ಗೆ ಬಂಧಿಸಲಾಯಿತು. ಬಂಧನಕ್ಕೂ ಮುನ್ನ ಸುಮಾರು ಒಂದು ತಾಸು ಕಾಲ ಅರ್ನಾಬ್‌ ಅವರು ಮನೆಯ ಬಾಗಿಲನ್ನು ತೆರೆಯದೆ ಬಂಧನಕ್ಕಾಗಿ ಆಗಮಿಸಿದ್ದ ಅಧಿಕಾರಿಗಳ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಿದರು ಎಂದು ಮಹಾರಾಷ್ಟ್ರ ಪೊಲೀಸರು ಆರೋಪಿಸಿದ್ದಾರೆ.

ಅರ್ನಾಬ್ ಗೋಸ್ವಾಮಿ ಮತ್ತು ಇತರೆ ಇಬ್ಬರು ತಮ್ಮ ಕಂಪೆನಿಯ ಆರ್ಥಿಕ ಸಮಸ್ಯೆಗಳಿಗೆ ಕಾರಣ ಎಂದು 2018ರ ಮೇನಲ್ಲಿ ಅನ್ವಯ್ ನಾಯಕ್ ಎಫ್ಐಆರ್‌ನಲ್ಲಿ ವಿವರಿಸಿದ್ದರು.

ಅರ್ನಾಬ್‌ ಗೋಸ್ವಾಮಿ ಅವರನ್ನು ಅಲಿಬಾಗ್‌ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದ್ದು. ಅಲ್ಲಿಂದ ಅವರನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆಯಲು ಕೋರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ನಾಯಕ್‌ ಅವರ ಕಾನ್‌ಕಾರ್ಡ್ ಡಿಸೈನ್‌ ಪ್ರೈವೇಟ್‌ ಲಿಮಿಟೆಡ್‌ಗೆ‌ ರಿಪಬ್ಲಿಕ್‌ ಟಿವಿ 83 ಲಕ್ಷ ರೂಪಾಯಿ ಬಾಕಿ ಪಾವತಿಸಬೇಕಿತ್ತು ಎನ್ನಲಾಗಿದೆ. ಇದೇ ರೀತಿ, ಮತ್ತೆರಡು ಸಂಸ್ಥೆಗಳು ಸಹ ನಾಯಕ್‌ ಅವರ ಸಂಸ್ಥೆಗೆ ಬಾಕಿ ಹಣ ಉಳಿಸಿಕೊಂಡಿದ್ದವು. ಬಾಕಿ ಪಾವತಿಯಾಗದ ಹಿನ್ನೆಲೆಯಲ್ಲಿ ತಮ್ಮ ಮೇಲೆ ಸಾಲಗಾರರ ಒತ್ತಡ ಹೆಚ್ಚಾದ ಕಾರಣ ನಾಯಕ್‌ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

ಪ್ರಕರಣದ ಸಂಬಂಧ ನಾಯಕ್ ಅವರ ಪತ್ನಿ ಅಕ್ಷತಾ ಅವರು ಅಲಿಬಾಗ್‌ ಪೊಲೀಸ್‌ ಠಾಣೆಯಲ್ಲಿ ಅರ್ನಾಬ್‌ ಹಾಗೂ ಮತ್ತೆರಡು ಕಂಪೆನಿಗಳ ಮುಖ್ಯಸ್ಥರ ವಿರುದ್ಧ ದೂರು ದಾಖಲಿಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ಕುರಿತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕೋರಿ ನಾಯಕ್‌ ಕುಟುಂಬಸ್ಥರು ಮಹಾರಾಷ್ಟ್ರ ಗೃಹಸಚಿವರನ್ನು ಕೋರಿದ್ದರು. 2020ರ ಮೇ 26ರಂದು ಮಹಾರಾಷ್ಟ್ರ ಗೃಹ ಸಚಿವರು ಇದಕ್ಕೆ ಸಮ್ಮತಿಸಿದ ನಂತರ ಪ್ರಕರಣದ ತನಿಖೆಗೆ ಮತ್ತೆ ಚಾಲನೆ ದೊರೆತಿದ್ದು, ಇಂದು ಅರ್ನಾಬ್‌ ಬಂಧನವಾಗಿದೆ.

ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕೆಂದು ನಾಯಕ್‌ ಅವರ ಪತ್ನಿ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಅಭಿಯಾನ ನಡೆಸುವ ಮೂಲಕ ಗಮನಸೆಳೆದಿದ್ದರು. ಈ ಸಂಬಂಧ ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರು ವಿಶೇಷ ತಂಡದಿಂದ ತನಿಖೆಗೆ ಆದೇಶಿಸಿದ್ದರು.

ಅರ್ನಾಬ್ ಬಂಧನದ ಕುರಿತಾಗಿ ರಿಪಬ್ಲಿಕ್‌ ಟಿವಿ ಸುದ್ದಿ ಬಿತ್ತರಿಸಿದ್ದು, ಅರ್ನಾಬ್‌ ಮನೆಗೆ ಅವರನ್ನು ಬಂಧಿಸಲು ಬಂದ ಪೊಲೀಸರು ಅವರ ಮೇಲೆ ಬಲಪ್ರಯೋಗ ನಡೆಸಿದ್ದಾರೆ. ಬಳಿಕ ಅರ್ನಾಬ್‌ ಅವರನ್ನು ಪೊಲೀಸ್‌ ಠಾಣೆಗೆ ವ್ಯಾನ್‌ನಲ್ಲಿ ಕರೆದೊಯ್ಯಲಾಗಿದೆ ಎಂದು ಸುದ್ದಿ ಪ್ರಸಾರ ಮಾಡಿದೆ. ತನ್ನ ಪುತ್ರನ ಮೇಲೆಯೂ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್‌ ವ್ಯಾನ್‌ನಲ್ಲಿ ಕುಳಿತಿದ್ದ ವೇಳೆ ಗೋಸ್ವಾಮಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯಾದ ಎಎನ್‌ಐ ಟ್ವೀಟ್‌ ಮಾಡಿದೆ.

ಎನ್‌ಕೌಂಟರ್‌ ಖ್ಯಾತಿಯ ಸಚಿನ್‌ ವಾಜೆ ಅವರನ್ನು ಅರ್ನಾಬ್‌ ಬಂಧನಕ್ಕೆ ನಿಯೋಜಿಸಲಾಗಿತ್ತು. ಎಕೆ 47 ಮತ್ತು ಅರೆ ಸ್ವಯಂಚಾಲತ ಶಸ್ತ್ರಾಸ್ತ್ರ ಹೊಂದಿದ್ದ ಸಿಬ್ಬಂದಿಯನ್ನುಕಳುಹಿಸಿಕೊಡಲಾಗಿತ್ತು ಎಂದು ರಿಪಬ್ಲಿಕ್‌ ಟಿವಿ ಸುದ್ದಿ ಬಿತ್ತರಿಸಿದೆ. ಇದೇ ವೇಳೆ, ಪ್ರಭಾಪ್ರಭುತ್ವ ಭಾರತದಲ್ಲಿ ಮಾಧ್ಯಮದ ಸ್ವಾತಂತ್ರ್ಯದ ಮೇಲಿನ ಮಾರಣಾಂತಿಕ ಹಲ್ಲೆ ಎಂದು ರಿಪಬ್ಲಿಕ್‌ ಟಿವಿ ಹೇಳಿಕೆ ಬಿಡುಗಡೆ ಮಾಡಿದೆ.

2018ರ ಮೇನಲ್ಲಿ ನಾಯಕ್‌ ಮತ್ತು ಅವರ ತಾಯಿ ಅಲಿಬಾಗ್‌ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ನಾಯಕ್‌ ಅವರು ಮರಣಪತ್ರ ಬರೆದಿದ್ದು, ಅದರಲ್ಲಿ ತಮ್ಮ ಸಾವಿಗೆ ಗೋಸ್ವಾಮಿ ಕಾರಣ ಎಂದು ಉಲ್ಲೇಖಿಸಿದ್ದಾರೆ ಎಂದು ನಾಯಕ್‌ ಪತ್ನಿ ಆರೋಪಿಸಿದ್ದರು.

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದ ಕುರಿತ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ನಡೆಯನ್ನು ಇತ್ತೀಚೆಗೆ ಅರ್ನಾಬ್‌ ಕಟುವಾಗಿ ಟೀಕಿಸುತ್ತಿದ್ದರು. ಸುಶಾಂತ್‌ ಸಿಂಗ್‌ ಪ್ರಕರಣದಲ್ಲಿ ಮುಂಬೈ ಪೊಲೀಸರು ಮೃದು ಧೋರಣೆ ತಳೆದಿದ್ದಾರೆ ಎಂದು ಅರ್ನಾಬ್ ವಾಗ್ದಾಳಿ ನಡೆಸಿದ್ದರು. ‌

ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿಯ ಒಂದು ಕಾಲದ ಮಿತ್ರ ಪಕ್ಷವಾದ ಶಿವಸೇನಾ ನೇತೃತ್ವದ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದ ಉಗ್ರ ಟೀಕಾಕಾರರಾಗಿಯೂ ಅರ್ನಾಬ್‌ ಗುರುತಿಸಿಕೊಂಡಿದ್ದಾರೆ. ಅರ್ನಾಬ್‌ ಅವರ ಪತ್ರಿಕೋದ್ಯಮಕ್ಕಾಗಿ ಅವರನ್ನು ಪ್ರಕರಣದಲ್ಲಿ ಗುರಿಯಾಗಿಸಲಾಗಿದೆ ಎಂದು ರಿಪಬ್ಲಿಕ್‌ ಟಿವಿ ಪ್ರತಿಕ್ರಿಯಿಸಿದೆ.