ಸುದ್ದಿಗಳು

ಆರೋಪಪಟ್ಟಿ ಪರಿಗಣಿಸದಂತೆ ಮತ್ತೆ ಅರ್ನಾಬ್‌ ಅರ್ಜಿ: ಇತ್ತ ಟಿಆರ್‌ಪಿ ಹಗರಣದಲ್ಲಿ ʼರಿಪಬ್ಲಿಕ್‌ʼ ಅಧಿಕಾರಿಗೆ ಜಾಮೀನು

ಅನ್ವಯ್‌ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಪಟ್ಟಿ ಪರಿಗಣಿಸದಂತೆ ನಿರ್ದೇಶನ ನೀಡಬೇಕೆಂದು ಅರ್ನಾಬ್‌ ಬಾಂಬೆ ಹೈಕೋರ್ಟನ್ನು ಕೋರಿದ್ದಾರೆ. ಮತ್ತೊಂದೆಡೆ ಟಿಆರ್‌ಪಿ ಹಗರಣದಲ್ಲಿ ರಿಪಬ್ಲಿಕ್‌ ಟಿವಿಯ ಸಹಾಯಕ ಉಪಾಧ್ಯಕ್ಷನಿಗೆ ಜಾಮೀನು ದೊರೆತಿದೆ.

Bar & Bench

ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಬಾಂಬೆ ಹೈಕೋರ್ಟ್‌ಗೆ ಮತ್ತೊಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದು, ರಾಯಗಡ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯನ್ನು ಪರಿಗಣಿಸದಂತೆ ಅಲಿಬಾಗ್‌ನ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಒಳಾಂಗಣ ವಿನ್ಯಾಸಕ ಅನ್ವಯ್‌ ನಾಯಕ್‌ ಮತ್ತವರ ತಾಯಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ಅರ್ಜಿಯ ವಿಚಾರಣೆ ಬಾಕಿ ಇದ್ದರೂ ರಾಯಗಡ ಪೊಲೀಸರು ಯಾವುದೇ ನೋಟಿಸ್‌ ನೀಡದೆ ಅಥವಾ ಅದರ ಪ್ರತಿಯನ್ನೂ ಒದಗಿಸದೆ ಅಲಿಬಾಗ್‌ ನ್ಯಾಯಾಧೀಶರಿಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದು ಸೂಕ್ತ ಆರೋಪಪಟ್ಟಿ ಸಲ್ಲಿಕೆ ಪ್ರಕ್ರಿಯೆಯ ಸಂಪೂರ್ಣ ಉಲ್ಲಂಘನೆ. ಮಹಾರಾಷ್ಟ್ರ ಗೃಹ ಸಚಿವರು ರಾಜಕೀಯ ಸೂಚನೆ ನೀಡಿದ ಕೆಲ ಗಂಟೆಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ದೋಷಾರೋಪ ಪಟ್ಟಿಯ ತನಿಖೆ ಸೇರಿದಂತೆ ತಮ್ಮ ವಿರುದ್ಧದ ಎಲ್ಲಾ ತನಿಖೆಗಳಿಗೆ ತಡೆ ನೀಡಬೇಕು ಎಂದು ಅವರು ಕೋರಿದ್ದಾರೆ.

ಪ್ರತ್ಯೇಕ ಪ್ರಕರಣದಲ್ಲಿ ರಿಪಬ್ಲಿಕ್‌ ಟಿವಿ ಸಹಾಯಕ ಉಪಾಧ್ಯಕ್ಷನಿಗೆ ಜಾಮೀನು

ಮತ್ತೊಂದೆಡೆ ಟಿಆರ್‌ಪಿ ಮಾಹಿತಿಯನ್ನು ತಿರುಚಿದ ಪ್ರಕರಣದಲ್ಲಿ ರಿಪಬ್ಲಿಕ್‌ ಟಿವಿಯ ಸಹಾಯಕ ಉಪಾಧ್ಯಕ್ಷ ಘನಶ್ಯಾಂ ಸಿಂಗ್‌ ಅವರಿಗೆ ಮುಂಬೈನ ನ್ಯಾಯಾಲಯವೊಂದು ಜಾಮೀನು ನೀಡಿದೆ. ಹೆಚುವರಿ ಸೆಷನ್ಸ್‌ ನ್ಯಾಯಾಧೀಶ ಡಿ ಇ ಕೊಥಾಲಿಕರ್‌ ಅವರು ಈ ಸಂಬಂಧ ಆದೇಶ ನೀಡಿದ್ದು ರೂ 50,000 ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಇಬ್ಬರ ಜಾಮೀನು ಮತ್ತಿತರ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿದೆ.

ಟಿಆರ್‌ಪಿ ಹಗರಣದಲ್ಲಿ ಬಂಧಿಸಲಾಗಿದ್ದ ಸಿಂಗ್‌ ಅವರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಪ್ರಕರಣದ ವಿಚಾರಣೆ ಮುಗಿಯುವವರೆಗೆ ಸಿಂಗ್ ಪ್ರತಿ ಸೋಮವಾರ ಮತ್ತು ಶುಕ್ರವಾರ ಕಂಡಿವಲಿಯ ಅಪರಾಧ ವಿಭಾಗದ ಕಚೇರಿಗೆ ಹಾಜರಾಗಬೇಕು. ಪೂರ್ವಾನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ ಎಂದು ಕೂಡ ನ್ಯಾಯಾಲಯ ಆದೇಶಿಸಿದೆ.