Arnab Goswami 
ಸುದ್ದಿಗಳು

ಸುಳ್ಳು ಸುದ್ದಿ ಪ್ರಸಾರ: ಪ್ರತೀಕಾರ ತೀರಿಸಿಕೊಳ್ಳಲು ಅರ್ನಾಬ್‌ ವಿರುದ್ಧ ಪ್ರಕರಣ ಎಂದ ಹೈಕೋರ್ಟ್‌, ಕೇಸ್‌ ರದ್ದು

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದಲ್ಲಿ ಅರ್ನಾಬ್‌ ಪರಿಚಿತ ಹೆಸರು ಎಂಬ ಕಾರಣಕ್ಕಾಗಿ ಸಕಾರಣವಿಲ್ಲದೇ ಅವರನ್ನು ಅಪರಾಧದ ಜಾಲಕ್ಕೆ ಎಳೆದು ತರಲಾಗಿದೆ ಎಂದ ನ್ಯಾಯಾಲಯ.

Bar & Bench

ಅರ್ನಾಬ್‌ ಗೋಸ್ವಾಮಿ ಮಾಧ್ಯಮ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರಾಗಿದ್ದು, ಬೇಜವಾಬ್ದಾರಿ ಮತ್ತು ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಸುದ್ದಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದ್ದು ಅರ್ನಾಬ್‌ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ರಿಪಬ್ಲಿಕ್‌ ಟಿವಿ ಕನ್ನಡವು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ಅರ್ನಾಬ್‌ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ರದ್ದುಪಡಿಸಿತು.

"ಗೋಸ್ವಾಮಿ ಅವರು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭದಲ್ಲಿ ಚಿರಪರಿಚಿತ ಹೆಸರಾಗಿರುವುದರಿಂದ ಯಾವುದೇ ಸಕಾರಣವಿಲ್ಲದೇ ಅಪರಾಧದ ಜಾಲಕ್ಕೆ ಎಳೆದು ತರಲಾಗಿದೆ. ಅರ್ನಾಬ್‌ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ ಎಂದು ಬಿಂಬಿಸಲು ಯತ್ನಿಸಲಾಗಿದ್ದು, ಅದು ದುಸ್ಸಾಹಸವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಅರ್ನಾಬ್‌ ಏನು ಅಪರಾಧ ಎಸಗಿದ್ದಾರೆ” ಎಂದು ಪೀಠವು ಬೆರಳು ಮಾಡಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಅವರೇನೂ ಮಾಡಿಲ್ಲ. ಆದ್ದರಿಂದ, ಅರ್ನಾಬ್‌ ಗೋಸ್ವಾಮಿ ಎಂಬ ಕಾರಣಕ್ಕಾಗಿ ಅವರನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಗೋಸ್ವಾಮಿಯನ್ನು ಈ ಪ್ರಕರಣದಲ್ಲಿ ಹೇಗೆ ಎಳೆದು ತರಬಹುದು ಎಂಬುದು ಅರ್ಥವಾಗುತ್ತಿಲ್ಲ. ರಿಪಬ್ಲಿಕ್‌ ಮೀಡಿಯಾ ನೆಟ್‌ವರ್ಕ್‌ನ ಮುಖ್ಯಸ್ಥರಾಗಿ ಅವರು ಸಮುದಾಯಗಳ ನಡುವೆ ದ್ವೇಷ ಹರಡುವ ಹೇಳಿಕೆ ಅಥವಾ ಸುದ್ದಿ ಪ್ರಕಟಿಸಿದ್ದಾರೆಯೇ… ಪ್ರತೀಕಾರ ತೀರಿಸಿಕೊಳ್ಳಲು ಅವರನ್ನು ಎಳೆದು ತಂದಿರುವುದಕ್ಕೆ ಇದು ವಿಶಿಷ್ಟ ಪ್ರಕರಣವಾಗಿದೆ. ದೂರು ದಾಖಲಾದಾಗಿನಿಂದಲೂ ದುಸ್ಸಾಹಸ ಕಾಣಸಿಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

"ಈ ನೆಲೆಯಲ್ಲಿ ತನಿಖೆ ಮುಂದುವರಿಸಲು ಅನುಮತಿಸುವುದು ಕಾನೂನಿನ ದುರ್ಬಳಕೆಯಾಗಲಿದ್ದು, ನ್ಯಾಯದಾನಕ್ಕೆ ವಿರುದ್ಧ ನಡೆಯಾಗಲಿದೆ. ಹೀಗಾಗಿ, ಅರ್ನಾಬ್‌ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗುತ್ತಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.