ವಿಚಾರಣಾ ನ್ಯಾಯಾಲಯವೊಂದು ತಡೆಯಾಜ್ಞೆ ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿದ ರಿಟ್ ಅರ್ಜಿಯನ್ನು ಸಂವಿಧಾನದ 226 ಮತ್ತು 227ನೇ ವಿಧಿ ಅಡಿ ಸ್ವೀಕರಿಸಲಾಗದು ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತಿಳಿಸಿತು.
ರಾಜಸ್ಥಾನ ಹಿಡುವಳಿ ಕಾಯಿದೆ 1955ರ ಸೆಕ್ಷನ್ 212 ರ ಅಡಿಯಲ್ಲಿ ಅರ್ಜಿದಾರರು ಸಲ್ಲಿಸಿದ ತಡೆಯಾಜ್ಞೆ ಅರ್ಜಿಯನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಅರ್ಜಿದಾರರ ಗುಂಪು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನ್ಯಾ. ದಿನೇಶ್ ಮೆಹ್ತಾ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.
ವಿಚಾರಣಾ ನ್ಯಾಯಾಲಯದಿಂದ ತಡೆಯಾಜ್ಞೆ ಅರ್ಜಿಯನ್ನು ತಿರಸ್ಕರಿಸುವ ಬಗ್ಗೆ ಮೇಲ್ಮನವಿ ಪ್ರಾಧಿಕಾರದ ಎದುರು 1955ರ ರಾಜಸ್ಥಾನ ಹಿಡುವಳಿ ಕಾಯಿದೆ ಈಗಾಗಲೇ ಪರಿಹಾರ ಒದಗಿಸುತ್ತಿದೆ. ಅದರ ಹೊರತಾಗಿಯೂ ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ನೇರವಾಗಿ ಹೈಕೋರ್ಟ್‌ಗೆ ಧಾವಿಸಿ ರಿಟ್ ನ್ಯಾಯವ್ಯಾಪ್ತಿಯಲ್ಲಿ ಪರಿಹಾರ ಕೋರಲು ಅನುಮತಿಸಲಾಗದು ಎಂದು ಪೀಠ ಹೇಳಿತು.
“1955ರ ಕಾಯಿದೆಯಲ್ಲಿ ಮೇಲ್ಮನವಿ ಪ್ರಾಧಿಕಾರದ ಶ್ರೇಣಿ ಒದಗಿಸಲಾಗಿರುವುರದಿಂದ ವಿಚಾರಣಾ ನ್ಯಾಯಾಲಯ ತಡೆಯಾಜ್ಞೆ ಅರ್ಜಿಯನ್ನು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸಂವಿಧಾನದ 226 ಮತ್ತು 227ನೇವಿಧಿ ಅಡಿ ಸ್ವೀಕರಿಸಲಾಗದು. ಅರ್ಜಿದಾರರು ಕಾನೂನಿನ ಪ್ರಕಾರ ಲಭ್ಯವಿರುವ ಮೇಲ್ಮನವಿಯ ಪರಿಹಾರವನ್ನು ಪಡೆದುಕೊಳ್ಳುವ ಅಗತ್ಯವಿದೆ” ಎಂದು ಪೀಠ ಹೇಳಿತು.
ರಾಜಸ್ಥಾನ ಹಿಡುವಳಿ ಕಾಯಿದೆ 1955ರ ಅಡಿಯಲ್ಲಿ ಮೇಲ್ಮನವಿ ಪ್ರಾಧಿಕಾರದ ಪರಿಹಾರ ಲಭ್ಯವಿರುವುದನ್ನು ಮತ್ತು ವಾಸ್ತವಾಂಶಗಳನ್ನು ಪರಿಗಣಿಸಿ, ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತಲ್ಲದೆ ಅದನ್ನು ವಜಾಗೊಳಿಸಿತು. ಆದರೂ ಕಾಯಿದೆಯಡಿ ಲಭ್ಯವಿರುವ ಕಾನೂನು ಪರಿಹಾರವನ್ನು ಪಡೆಯಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.