Prime Minister Narendra Modi  
ಸುದ್ದಿಗಳು

ಸಾಂವಿಧಾನಿಕ ಏಕತೆಗೆ 370ನೇ ವಿಧಿ ರದ್ದತಿ ಹಾಗೂ ಮಾನವತೆಯ ಕಾನೂನಿಗೆ ಸಿಎಎ ನಿದರ್ಶನಗಳು: ಪ್ರಧಾನಿ ಮೋದಿ

ಜೋಧ್‌ಪುರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜಸ್ಥಾನ ಹೈಕೋರ್ಟ್‌ನ ಎಪ್ಪತ್ತನೇ ವರ್ಷಾಚರಣೆ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು.

Bar & Bench

ಸಂವಿಧಾನದ 370 ನೇ ವಿಧಿ ರದ್ದುಗೊಳಿಸಿರುವುದು ಸಾಂವಿಧಾನಿಕ ಏಕೀಕರಣದ ಉದಾಹರಣೆಯಾಗಿದೆ. ಅಂತೆಯೇ  ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮಾನವತೆಯ ಕಾನೂನು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜೋಧ್‌ಪುರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜಸ್ಥಾನ ಹೈಕೋರ್ಟ್‌ನ ಎಪ್ಪತ್ತನೇ ವರ್ಷಾಚರಣೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

“ವಿಧಿ 370 ರದ್ದುಗೊಳಿಸಿದ್ದು ಸಾಂವಿಧಾನಿಕ ಏಕತೆಗೆ ಉದಾಹರಣೆಯಾಗಿದೆ, ಅದೇ ರೀತಿ ಸಿಎಎ ಮಾನವೀಯ ಕಾನೂನಿಗೆ ಉದಾಹರಣೆಯಾಗಿ ನಮ್ಮ ಮುಂದಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಇಂತಹ ವಿಚಾರಗಳಲ್ಲಿ ಸಾಮಾನ್ಯ ನ್ಯಾಯದ ಬಗ್ಗೆ ನಮ್ಮ ನ್ಯಾಯಾಲಯದ ತೀರ್ಪುಗಳು ಹೇಳುತ್ತವೆ. ಸುಪ್ರೀಂ ಕೋರ್ಟ್‌ನಿಂದ ಹಿಡಿದು ಕೆಳ ನ್ಯಾಯಾಲಯಗಳವರೆಗೆ ಇಂತಹ ವಿಚಾರಗಳಲ್ಲಿ ದೇಶ ಮೊದಲು ಎಂಬ ತತ್ವ ಅಳವಡಿಸಿಕೊಳ್ಳಲಾಗಿದೆ” ಎಂದು ಅವರು ಹೇಳಿದರು.

ಭಾಷಣದ ಪ್ರಮುಖಾಂಶಗಳು

  • ಭಾರತದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯನ್ನು ಸರಳಗೊಳಿಸುವ ಅಗತ್ಯವಿದೆ.  

  • ನ್ಯಾಯ ದೊರೆಯುವಿಕೆ ಸದಾ ಸರಳ ಮತ್ತು ನೇರವಾಗಿರಬೇಕು ಆದರೆ ವಿಚಾರಣಾ ಪ್ರಕ್ರಿಯೆಗಳು ಅದನ್ನು ಸಂಕೀರ್ಣಗೊಳಿಸುತ್ತಿವೆ.

  • ವಸಾಹತುಶಾಹಿ ಯುಗದ ಕಾನೂನುಗಳ ಸಂಪೂರ್ಣ ರದ್ದತಿ ಮತ್ತು ಭಾರತೀಯ ನ್ಯಾಯ ಸಂಹಿತೆ ಜಾರಿಯಾಗಿದೆ. ಇದು ವಸಾಹತುಶಾಹಿ ಸಂಕೋಲೆಯಿಂದ ನಮ್ಮನ್ನು ಮುಕ್ತಗೊಳಿಸುತ್ತದೆ.

  • ನ್ಯಾಯಾಂಗ ಆಧುನೀಕರಣದ ನಿಟ್ಟಿನಲ್ಲಿ ದೇಶದ 18,000 ಕ್ಕೂ ಹೆಚ್ಚು ನ್ಯಾಯಾಲಯಗಳನ್ನು ಗಣಕೀಕರಣಗೊಳಿಸಲಾಗಿದೆ.

  • ಸುಮಾರು 3,000 ಕ್ಕೂ ಹೆಚ್ಚು ನ್ಯಾಯಾಲಯ ಸಂಕೀರ್ಣಗಳು ಮತ್ತು 1,200 ಜೈಲುಗಳು ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ ಪಡೆದಿವೆ.

  • ಏಕರೂಪ ನಾಗರಿಕ ನಾಗರಿಕ ಸಂಹಿತೆ ಜಾರಿಗೆ ಬರಲೇಬೇಕು ಎಂದು ಸರ್ಕಾರ ದೃಢ ನಿಲುವು ತಳೆದಿದ್ದು ನ್ಯಾಯಾಂಗವೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಬಹಳ ಹಿಂದಿನಿಂದ ಹೇಳುತ್ತಾ ಬಂದಿದೆ.

  • ದೇಶದ ಏಕತೆಯ ವಿಷಯಗಳಲ್ಲಿ, ನ್ಯಾಯಾಂಗದ ಈ ನಿಲುವು ನ್ಯಾಯಾಂಗದ ಮೇಲಿನ ಸಾಮಾನ್ಯ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ.