Article 370
Article 370 
ಸುದ್ದಿಗಳು

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ: ಆಗಸ್ಟ್ 2ರಿಂದ ಪ್ರಕರಣದ ಅಂತಿಮ ವಿಚಾರಣೆ ಆರಂಭಿಸಲಿರುವ ಸುಪ್ರೀಂ ಕೋರ್ಟ್‌

Bar & Bench

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 2ರಿಂದ ಆರಂಭಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು ಅಂದಿನಿಂದ ಸೋಮವಾರ, ಶುಕ್ರವಾರ ಹೊರತುಪಡಿಸಿ ದಿನವಹಿ ಪ್ರಕರಣದ ವಿಚಾರಣೆ ನಡೆಸುವುದಾಗಿ ಅದು ಮಾಹಿತಿ ನೀಡಿದೆ.

ಎಲ್ಲಾ ದಾಖಲೆ, ಸಂಗ್ರಹಗಳು, ಹಾಗೂ ವಾದಗಳ ಲಿಖಿತ ಪ್ರತಿಯನ್ನು ಜುಲೈ 27ರೊಳಗೆ  ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ತಿಳಿಸಿದೆ.

ವಕೀಲರಾದ ಪ್ರಸನ್ನ ಮತ್ತು ಕನು ಅಗರವಾಲ್ ಅವರು ಪ್ರಕರಣದ ದಾಖಲೆಗಳನ್ನು ಕ್ರೋಡೀಕರಿಸುವ ನೋಡಲ್‌ ವಕೀಲರಾಗಿರುತ್ತಾರೆ ಎಂದು ನ್ಯಾಯಾಲಯ ಸೂಚಿಸಿದೆ.

ಸಾಂವಿಧಾನಿಕತೆಯ ಅಂಶದ ಮೇಲೆ ವಾದಿಸಲು ತಾನು ಇತ್ತೀಚೆಗೆ ಸಲ್ಲಿಸಿದ್ದ ಅಫಿಡವಿಟ್‌ ಅನ್ನು ಅವಲಂಬಿಸುವುದಿಲ್ಲ ಎನ್ನುವ ಕೇಂದ್ರದ ಹೇಳಿಕೆಯನ್ನು ನ್ಯಾಯಾಲಯ ಗಮನಿಸಿತು. ಅಲ್ಲದೆ, ಅರ್ಜಿದಾರರಾದ ಶಾ ಫೈಸಲ್ ಮತ್ತು ಶೆಹ್ಲಾ ರಶೀದ್ ತಮ್ಮ ಮನವಿ ಹಿಂಪಡೆಯಲು ಸಹ ಪೀಠ ಅನುಮತಿಸಿದೆ.

ಜಮ್ಮು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿ ರದ್ದುಗೊಂಡ ನಾಲ್ಕು  ವರ್ಷಗಳ ಬಳಿಕ ಈ ಬೆಳವಣಿಗೆಗಳು ನಡೆಯುತ್ತಿವೆ. ವಿಧಿ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ  20ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ.