A1
ಸುದ್ದಿಗಳು

ವಿಧಿ 370: ಕಾಶ್ಮೀರ ಭಾರತದ ಭಾಗ ಎಂದು ಪ್ರಮಾಣ ಮಾಡಿದ ಅಫಿಡವಿಟ್‌ ಸಲ್ಲಿಸಲು ಸಂಸದ ಲೋನ್‌ಗೆ ಸೂಚಿಸಿದ ಸುಪ್ರೀಂ

ಅರ್ಜಿದಾರರಲ್ಲಿ ಒಬ್ಬರಾದ ಲೋನ್ ಅವರು ವಿಧಾನಸಭೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಹೇಳಿದ್ದಾರೆ ಎಂಬುದಾಗಿ ಪ್ರಕರಣದ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೂರಿದರು.

Bar & Bench

ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದನ್ನು ಪ್ರಶ್ನಿಸಿರುವ ಅರ್ಜಿದಾರ ಹಾಗೂ ಲೋಕಸಭಾ ಸದಸ್ಯ ಅಕ್ಬರ್‌ ಲೋನ್‌ ಅವರು ಸಂವಿಧಾನಕ್ಕೆ ತಮ್ಮ ನಿಷ್ಠೆ ವ್ಯಕ್ತಪಡಿಸಿ ಪ್ರಮಾಣಪತ್ರ (ಅಫಿಡವಿಟ್‌) ದಾಖಲಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

ಅಲ್ಲದೆ ಕಾಶ್ಮೀರ ಭಾರತ ಒಕ್ಕೂಟದ ಅವಿಭಾಜ್ಯ ಅಂಗ ಎಂದು ಹೇಳಿಕೆ ನೀಡುವಂತೆ ಅವರನ್ನು ಕೇಳಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಹಾಗೂ ಸೂರ್ಯಕಾಂತ್ ಅವರಿದ್ದ ಸಾಂವಿಧಾನಿಕ ಪೀಠ 370ನೇ ವಿಧಿ ರದ್ದತಿ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಈ ನಿರ್ದೇಶನ ನೀಡಿತು.

ಎಲ್ಲ ಭಾರತೀಯರಂತೆ ಸಂವಿಧಾನಕ್ಕೆ ನಿಷ್ಠೆ ವ್ಯಕ್ತಪಡಿಸುವುದಾಗಿ ಮತ್ತು ಜಮ್ಮ ಕಾಶ್ಮೀರ ಉಳಿದ ಭಾಗಗಳಂತೆ ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿದೆ ಎಂದು ಲೋನ್‌ ಅವರು ಅಫಿಡವಿಟ್‌ ಸಲ್ಲಿಸಲಿ. ಇಲ್ಲಿ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದವರೂ ಸೇರಿದಂತೆ ಎಲ್ಲರೂ ಇದ್ದಾರೆ ಎಂದು ನ್ಯಾಯಾಲಯ ನುಡಿಯಿತು.

ಅರ್ಜಿದಾರರಲ್ಲಿ ಒಬ್ಬರಾದ ಲೋನ್ ಅವರು ವಿಧಾನಸಭೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಕೂಗಿದ್ದರು ಎಂಬುದಾಗಿ ಪ್ರಕರಣದ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೂರಿದ ಬಳಿಕ ನ್ಯಾಯಾಲಯ ಈ ನಿರ್ದೇಶನ ನೀಡಿತು.

ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ತಾನು ಬಲವಾಗಿ ವಿರೋಧಿಸುವುದಾಗಿ ಲೋನ್‌ ಅವರು ಹೇಳಿಕೆ ನೀಡಲಿ ಎಂದು ಕೂಡ ತುಷಾರ್‌ ಮೆಹ್ತಾ ಅವರು ಒತ್ತಾಯಿಸಿದರು. ಎಸ್‌ಜಿ ಅವರ ಮಾತಿಗೆ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಕೂಡ ದನಿಗೂಡಿಸಿದರು. ಲೋನ್‌ ತಮ್ಮ ಮೂಲಭೂತ ಹಕ್ಕು ಜಾರಿಗೆ ಆಗ್ರಹಿಸುತ್ತಾರೆ, ಅದರೆ ನಂತರ ವ್ಯತಿರಿಕ್ತ ನಿಲುವು ತಳೆಯುತ್ತಾರೆ ಎಂಬುದಾಗಿ ಎಜಿ ಹೇಳಿದರು.

ಆಗ ಸಿಜೆಐ ಅವರು ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಲೋನ್ ನ್ಯಾಯಾಲಯವನ್ನು ಕೋರಿದ್ದರೆ ಅವರು ಈ ರಾಷ್ಟ್ರದ ಸಾರ್ವಭೌಮತ್ವವನ್ನು ಜೊತೆಗೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ನಂಬಬೇಕು. ಅದನ್ನು ಸೂಚಿಸುವ ಅಫಿಡವಿಟ್ಟನ್ನು ಅವರು ಸಲ್ಲಿಸಬೇಕು ಎಂದರು.

ಈ ಹಂತದಲ್ಲಿ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ʼಲೋನ್‌ ಅವರು ಸಂಸದರಾಗಿದ್ದು ಕಾಶ್ಮೀರ ಭಾರತದ ಭಾಗ ಎಂದು ಬಲವಾಗಿ ನಂಬುತ್ತಾರೆ ಎಂದು ಸೂಚಿಸಿದರು. ಆದರೂ ಲೋನ್‌ ಈ ಕುರಿತು ಪ್ರಮಾಣ ಮಾಡಿದ ಅಫಿಡವಿಟ್‌ ಸಲ್ಲಿಸಬೇಕು ಎಂದು ಸಿಜೆಐ ಖಚಿತವಾಗಿ ನುಡಿದರು.