ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪದವಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ₹25,000 ದಂಡ ವಿಧಿಸಿರುವುದು ಸಮರ್ಥನೀಯ ಎಂದಿರುವ ಗುಜರಾತ್ ಹೈಕೋರ್ಟ್, ಕೇಜ್ರಿವಾಲ್ ಅವರು ಇಡೀ ಪ್ರಕರಣವನ್ನು ರಾಜಕೀಯಗೊಳಿಸಲು ಪ್ರಯತ್ನಿಸಿದ್ದು, ಮಾಹಿತಿ ಹಕ್ಕು ಕಾಯಿದೆಯನ್ನು (ಆರ್‌ಟಿಐ) ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದೆ [ಅರವಿಂದ್ ಕೇಜ್ರಿವಾಲ್ ವರ್ಸಸ್ ಗುಜರಾತ್ ಹೈಕೋರ್ಟ್].
ಕಾನೂನಿನಲ್ಲಿ ಅವಕಾಶವಿಲ್ಲದಿರುವ ಮಾಹಿತಿಯನ್ನು ಪಡೆಯಲು ಮಾಹಿತಿ ಹಕ್ಕು ಕಾಯಿದೆಯನ್ನು ಅಸ್ತ್ರವಾಗಿ ಬಳಸಲಾಗಿದೆ ಎಂದು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.
“ಮುಖ್ಯ ಮಾಹಿತಿ ಆಯುಕ್ತರ ಮುಂದಿನ ಪ್ರಕ್ರಿಯೆಯಲ್ಲಿ ಪ್ರತಿವಾದಿಯಾಗಿದ್ದ ಅರ್ಜಿದಾರ ಕೇಜ್ರಿವಾಲ್ ಅವರು ಮಾಹಿತಿ ಕೋರಿ ಬರೆದಿದ್ದ ಪತ್ರದಲ್ಲಿ ಬಳಕೆ ಮಾಡಿದ್ದ ಭಾಷೆಯು ವ್ಯವಸ್ಥಿತವಾಗಿ ಪ್ರಕ್ರಿಯೆಯನ್ನು ಹಾದಿ ತಪ್ಪಿಸುವಂತಿತ್ತು. ಅರ್ಜಿಯನ್ನು ನೋಡಿದರೆ ಕೇಜ್ರಿವಾಲ್ ಅವರು ಇಡೀ ಪ್ರಕ್ರಿಯೆಯನ್ನು ರಾಜಕೀಯಗೊಳಿಸಲು ಯತ್ನಿಸಿರುವುದು ಗೋಚರಿಸುತ್ತದೆ. ಇದು ಸಂಪೂರ್ಣವಾಗಿ ಆರ್‌ಟಿಐ ಪ್ರಕ್ರಿಯೆಯ ದುರ್ಬಳಕೆಯಾಗಿದೆ. ಹೀಗಾಗಿ, ದಂಡ ವಿಧಿಸಿರುವುದು ಸಮರ್ಥನೀಯ” ಎಂದು ನ್ಯಾ. ವೈಷ್ಣವ್ ಹೇಳಿದ್ದಾರೆ.