ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ನೇತೃತ್ವದ ದೆಹಲಿ ಸರ್ಕಾರ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ನೇತೃತ್ವದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ಗಳು (ಎಂಸಿಡಿ) 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಒದಗಿಸಲು ವಿಫಲವಾಗಿವೆ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಛೀಮಾರಿ ಹಾಕಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್‌ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ವಿಭಾಗೀಯ ಪೀಠವು ದೆಹಲಿ ಸರ್ಕಾರವು ಅಧಿಕಾರವನ್ನು ದಕ್ಕಿಸಿಕೊಳ್ಳುವಲ್ಲಿ ಮಾತ್ರ ಆಸಕ್ತಿ ಹೊಂದಿದೆ ಎಂದಿದೆ. ಮುಂದುವರೆದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ್ದರೂ ಸಹ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಾಗಿ ವೈಯಕ್ತಿಕ ಹಿತಾಸಕ್ತಿ ಮೆರೆದಿದ್ದಾರೆ ಎಂದು ಬೇಸರಿಸಿದೆ.
ಎಂಸಿಡಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಪಡೆದಿಲ್ಲ. ಅಲ್ಲದೆ, ಎಂಸಿಡಿಯೊಳಗಿನ ತಿಕ್ಕಾಟಗಳಿಂದಾಗಿ ವಿದ್ಯಾರ್ಥಿಗಳು ಟಿನ್ ಶೆಡ್‌ಗಳಲ್ಲಿ ಓದುತ್ತಿದ್ದಾರೆ ಎಂಬ ಅಂಶಗಳನ್ನು ಮುಂದೆ ಮಾಡಿ ದೆಹಲಿ ಸರ್ಕಾರ ಹಾಗೂ ಎಂಸಿಡಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು ಕೋರಿ ಸೋಶಿಯಲ್ ಜ್ಯೂರಿಸ್ಟ್ ಎಂಬ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಕೋರ್ಟ್ ವಿಚಾರಣೆ ನಡೆಸಿತು.
"ಪುಸ್ತಕಗಳು, ಸಮವಸ್ತ್ರ ಇತ್ಯಾದಿಗಳ ವಿತರಣೆ ಬಗ್ಗೆ ಗಮನಹರಿಸುವುದು ನ್ಯಾಯಾಲಯವಾಗಿ ನಮ್ಮ ಕೆಲಸವಲ್ಲ. ಯಾರೋ ಒಬ್ಬರು ತಮ್ಮ ಕೆಲಸದಲ್ಲಿ ವಿಫಲರಾಗಿರುವುದರಿಂದ ನಾವು ಇದನ್ನು ಮಾಡುತ್ತಿದ್ದೇವೆ... ನಿಮ್ಮ ಕಕ್ಷಿದಾರರು ಕೇವಲ ಅಧಿಕಾರದಲ್ಲಿ ಆಸಕ್ತಿ ಹೊಂದಿದ್ದಾರೆ. ನಿಮಗೆ ಎಷ್ಟು ಅಧಿಕಾರ ಬೇಕು ಎಂದು ನನಗೆ ತಿಳಿದಿಲ್ಲ. ನೀವು ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿರುವುದರಿಂದ ಸಮಸ್ಯೆಯಾಗಿದೆ, ಅದಕ್ಕಾಗಿಯೇ ನೀವು ಅಧಿಕಾರವನ್ನು ಪಡೆಯುತ್ತಿಲ್ಲ, ”ಎಂದು ನ್ಯಾಯಾಲಯ ಈ ವೇಳೆ ಆಕ್ರೋಶ ವ್ಯಕ್ತಪಡಿಸಿದೆ.
ದೆಹಲಿ ಸರ್ಕಾರದ ಪರ ವಕೀಲ ಶದಾನ್ ಫರಾಸತ್ ಅವರು ಪ್ರತಿಕ್ರಿಯಿಸಿ, MCD ಯ ಸ್ಥಾಯಿ ಸಮಿತಿಯ ಅನುಪಸ್ಥಿತಿಯಲ್ಲಿ, ಹೆಚ್ಚಿನ ಅಧಿಕಾರವನ್ನು ಸೂಕ್ತ ಪ್ರಾಧಿಕಾರಕ್ಕೆ ನಿಯೋಜಿಸಲು ಪ್ರಸ್ತುತ ಬಂಧನದಲ್ಲಿರುವ ಮುಖ್ಯಮಂತ್ರಿಯವರ ಒಪ್ಪಿಗೆ ಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಸೌರಭ್ ಭಾರದ್ವಾಜ್ ಅವರಿಂದ ತಾವು ಮಾಹಿತಿ ಪಡೆದಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸಿಜೆ ಮನಮೋಹನ್ ಅವರು ಇದು (ಪಠ್ಯಪುಸ್ತಕ ವಿತರಿಸದೆ ಇರುವುದಕ್ಕೆ) ಕಾರಣವಾಗಬಾರದು ಎಂದರು. ಅಲ್ಲದೆ, ಅರವಿಂದ್ ಕೇಜ್ರಿವಾಲ್ ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಲು ನಿರ್ದೇಶನ ಕೋರಿ ಸಲ್ಲಿಸಲಾದ ವಿವಿಧ ಅರ್ಜಿಗಳನ್ನು ಹೈಕೋರ್ಟ್ ಸ್ವತಃ ತಿರಸ್ಕರಿಸಿದೆ ಎಂದು ಹೇಳಿದರು.
“ಮುಖ್ಯಮಂತ್ರಿ ಬಂಧನದಲ್ಲಿದ್ದರೂ ಸರ್ಕಾರ ಮುಂದುವರಿಯುತ್ತದೆ ಎಂದು ಹೇಳಿರುವುದು ನಿಮ್ಮ ಆಯ್ಕೆಯಾಗಿದೆ. ನಾವು ಹೋಗಲು ಇಷ್ಟಪಡದ ಹಾದಿಗೆ ನಮ್ಮನ್ನು ಒಯ್ಯಲು ನೀವು ಒತ್ತಾಯಿಸುತ್ತಿದ್ದೀರಿ. ನಮ್ಮ ಮುಂದೆ ಬಂದ ಪಿಐಎಲ್‌ಗಳ ವಿಚಾರಣೆ ವೇಳೆಯೇ ನಾವು ಅನೇಕ ಬಾರಿ ಹೇಳಿದ್ದೇವೆ. ಆದರೆ, ಇದು ನಿಮ್ಮ ಆಡಳಿತಾತ್ಮಕವಾದ ನಿರ್ಧಾರವಾಗಿದೆ... ನಾವು ಈ ಬಗ್ಗೆ ಪ್ರತಿಕ್ರಿಯಿಸಲೇಬೇಕೆಂದು ನೀವು ಬಯಸಿದರೆ ಆಗ ನಾವು ನಮ್ಮೆಲ್ಲಾ ಕಾಠಿಣ್ಯದೊಂದಿಗೆ ಪ್ರತಿಕ್ರಿಯಿಸಬೇಕಾಗುತ್ತದೆ," ಎಂದು ನ್ಯಾಯಾಲಯವು ದೆಹಲಿ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿತು.