ಸುದ್ದಿಗಳು

ರಾಜ್ಯ ಸರ್ಕಾರದ ಸಚಿವರ ವಿದೇಶ ಪ್ರವಾಸಕ್ಕೆ ಕೇಂದ್ರದ ಅನುಮತಿ: ದೆಹಲಿ ಹೈಕೋರ್ಟ್ ಮೊರೆ ಹೋದ ಆಪ್

Bar & Bench

ರಾಜ್ಯ ಸರ್ಕಾರದ ಸಚಿವರ ವಿದೇಶ ಪ್ರವಾಸಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕೆಂದು ಸೂಚಿಸುವ ಎರಡು ಕಚೇರಿ ಜ್ಞಾಪನಾ ಪತ್ರಗಳನ್ನು ರದ್ದುಗೊಳಿಸುವಂತೆ ಕೋರಿ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಕೈಲಾಶ್ ಗಹ್ಲೋಟ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಿಶ್ವ ನಗರಗಳ ಶೃಂಗಸಭೆಯಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ಪ್ರಯಾಣಿಸದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಇತ್ತೀಚೆಗೆ ನೀಡಿದ್ದ ಸೂಚನೆಯನ್ನು ರದ್ದುಗೊಳಿಸಬೇಕೆಂದು ಕೂಡ ಮನವಿಯಲ್ಲಿ ಕೋರಲಾಗಿದೆ.

ಗಹ್ಲೋಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ, ಈ ರೀತಿಯ ಅನುಮತಿಗಳ ನಿರಾಕರಣೆ ಸಂಪೂರ್ಣವಾಗಿ ಅನಿಯಂತ್ರಿತವಾಗಿರಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸ್ವಲ್ಪ ಸಮಯದವರೆಗೆ ಪ್ರಕರಣ ಆಲಿಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ ತಮ್ಮ ಮನವಿ ಕುರಿತು ಅಫಿಡವಿಟ್‌ ಸಲ್ಲಿಸಲು ಸಿಂಘ್ವಿ ಅವರಿಗೆ ಸಮಯಾವಕಾಶ ನೀಡಿದರು. ಆಗಸ್ಟ್ 22ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

2010ರಲ್ಲಿ ಹೊರಡಿಸಲಾದ ಒಂದು ಕಚೇರಿ ಜ್ಞಾಪನಾ ಪತ್ರ ಮತ್ತು 2015 ರಲ್ಲಿ ಹೊರಡಿಸಲಾದ ರಾಜ್ಯ ಸರ್ಕಾರದ ಸಚಿವರುಗಳು ವೈಯಕ್ತಿಕ ಭೇಟಿಗಾಗಿ ವಿದೇಶ ಪ್ರವಾಸ ಕೈಗೊಳ್ಳಲು ರಾಜಕೀಯ ಅನುಮತಿ ಪಡೆಯಬೇಕೆಂಬ ಜ್ಞಾಪನಾ ಪತ್ರ, ಹೀಗೆ ಒಟ್ಟು ಎರಡು ಕಚೇರಿ ಜ್ಞಾಪನಾ ಪತ್ರಗಳನ್ನು ರದ್ದುಗೊಳಿಸಬೇಕು. ಈ ಸಮಸ್ಯೆಗೆ ಕಡಿವಾಣ ಹಾಕಲು ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೇಜ್ರಿವಾಲ್‌ ಮತ್ತು ಎಎಪಿಯಿಂದ ಆರಂಭದಲ್ಲಿ ಇಂತಹ ನಿಲುವಿಗೆ ಆಕ್ಷೇಪ ವ್ಯಕ್ತವಾಗಿತ್ತು. ಘಟನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನೂ ಬರೆದಿದ್ದವು. ಆದರೆ ಈವಿಚಾರದಲ್ಲಿ ಯಾರನ್ನೂ ದೂಷಿಸುವುದಿಲ್ಲ ಎಂದು ಕೇಜ್ರಿವಾಲ್‌ ತಿಳಿಸಿದ್ದರು.