ಸುದ್ದಿಗಳು

ಆರ್ಯನ್ ಖಾನ್ ಜಾಮೀನು ಅರ್ಜಿ: ಅ 20ರಂದು ಆದೇಶ ಪ್ರಕಟಿಸಲಿರುವ ಮುಂಬೈ ನ್ಯಾಯಾಲಯ

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ ವಿ ಪಾಟೀಲ್ ಅವರು ಅ. 20ರಂದು ಆದೇಶ ಪ್ರಕಟಿಸಲಿದ್ದಾರೆ.

Bar & Bench

ವಿಲಾಸಿ ಹಡಗು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಪರವಾಗಿ ಸಲ್ಲಿಸಲಾದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಮುಂಬೈ ಸೆಷನ್ಸ್ ನ್ಯಾಯಾಲಯ ಇಂದು ತನ್ನ ಆದೇಶ ಕಾಯ್ದಿರಿಸಿತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ ವಿ ಪಾಟೀಲ್ ಅವರು ಅ. 20ರಂದು ಆದೇಶ ಪ್ರಕಟಿಸಲಿದ್ದಾರೆ.

ಎನ್‌ಸಿಬಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಇಂದು ತಮ್ಮ ವಾದ ಮುಂದುವರೆಸಿದರು. ಆರ್ಯನ್‌ ಅವರು ಕಳೆದ ಕೆಲ ವರ್ಷಗಳಿಂದ ನಿಯಮಿತವಾಗಿ ನಿಷೇಧಿತ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರು. ಅರ್ಜಿದಾರ ಸಹಿ ಮಾಡಿದ ಪಂಚನಾಮೆ ಪ್ರಕಾರ ಆತ (ಆರ್ಯನ್‌) ತನ್ನ ಸ್ನೇಹಿತನೊಂದಿಗೆ ಇದ್ದುದಾಗಿ ಒಪ್ಪಿಕೊಂಡಿದ್ದು, ಗೊತ್ತಿದ್ದೇ ಅವರಿಬ್ಬರೂ ನಿಷೇಧಿತ ಪದಾರ್ಥವನ್ನು ಬಳಸುತ್ತಿದ್ದರು ಎಂದು ಆರ್ಯನ್‌ಗೆ ಜಾಮೀನು ನೀಡುವುದನ್ನು ವಿರೋಧಿಸಿ ಅವರು ಹೇಳಿದರು.

ಮಾದಕವಸ್ತು ಕಳ್ಳಸಾಗಣೆ ತಡೆಯಲು ತಮ್ಮ ಜೀವ ಪಣಕ್ಕಿಟ್ಟು ಎನ್‌ಸಿಬಿ ಅಧಿಕಾರಿಗಳು ಹಗಲಿರುಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ವಿವರಿಸುವ ಮೂಲಕ ಅವರು ತಮ್ಮ ವಾದ ಪೂರ್ಣಗೊಳಿಸಿದರು.

ಖಾನ್‌ ಪರ ಹಾಜರಾದ ಹಿರಿಯ ವಕೀಲ ಅಮಿತ್‌ ದೇಸಾಯಿ ಅವರು ಕೂಡ ತಮ್ಮ ಪ್ರತ್ಯುತ್ತರ (ರಿಜಾಯಿಂಡರ್‌) ವಾದ ಮಂಡನೆ ವೇಳೆ ಎನ್‌ಸಿಬಿಯನ್ನು ಶ್ಲಾಘಿಸುತ್ತಾ “ಈ ಕೆಲಸ ಮಾಡಿದ್ದಕ್ಕಾಗಿ ಎನ್‌ಸಿಬಿಗೆ ಅಭಿನಂದನೆಗಳು. ಅವರು ಕಾನೂನು ರೀತಿಯಲ್ಲಿ ತನಿಖೆ ಮುಂದುವರೆಸುತ್ತಾರೆ ಎಂದು ಭಾವಿಸುತ್ತೇನೆ” ಎಂಬುದಾಗಿ ತಿಳಿಸಿದರು.

ದೇಸಾಯಿ ಅವರು ಬಹುಮುಖ್ಯವಾಗಿ ತಮ್ಮ ವಾದದಲ್ಲಿ ಆರ್ಯನ್‌ ಖಾನ್‌ ತಾವು ಡ್ರಗ್ಸ್ ಸೇವಿಸಿದ್ದರು ಎಂದು ನೀಡಿದ್ದ ಹೇಳಿಕೆಯನ್ನು ಹಿಂಪಡೆದಿದ್ದಾರೆ ಎಂದು ಹೇಳಿದರು. ಅಲ್ಲದೆ, ಮೊಬೈಲ್‌ ಫೋನ್‌ ಅನ್ನು ಅವರು ಸ್ವಇಚ್ಛೆಯಿಂದ ನೀಡಿರಲಿಲ್ಲ ಬದಲಿಗೆ ಅದನ್ನು ಜಪ್ತಿ ಮಾಡಲಾಗಿದೆ. ಆದರೆ, ಜಪ್ತಿ ಮಾಡಿದ ಕುರಿತಾದ ಮೆಮೋ ಸಲ್ಲಿಸಿಲ್ಲ ಎಂದರು. "ತನಿಖೆಯನ್ನು ಯಾರೂ ತಡೆಯುತ್ತಿಲ್ಲ. ಆದರೆ, ತನಿಖೆಯ ತಮ್ಮ (ಆರ್ಯನ್ ಖಾನ್) ಸ್ವಾತಂತ್ರ್ಯಹರಣವನ್ನು ಮಾಡಬಾರದು" ಎಂದು ವಾದಿಸಿದರು. ಇನ್ನು ವಾಟ್ಸಪ್‌ ಸಂದೇಶದ ಬಗ್ಗೆ ವಿವರಿಸಿದ ಅವರು ಯಾವುದೇ ದಿಕ್ಕಿನಿಂದ ನೋಡಿದರೂ ಅಕ್ರಮ ಮಾದಕವಸ್ತು ಸಾಗಣೆಯ ಅಥವಾ ಆಂತರಿಕ ಮಾದಕವಸ್ತು ಸಾಗಣೆಯ ಸಂಭಾಷಣೆಯನ್ನು ಈ ಹುಡುಗ (ಆರ್ಯನ್‌ ಖಾನ್‌) ನಡೆಸಿಲ್ಲ ಎಂದರು.

ತಮ್ಮ ವಾದ ಮುಕ್ತಾಯಗೊಳಿಸುತ್ತಾ ಅವರು “ಮೂಲ ವಾದ ಏನೆಂದರೆ ಅಲ್ಲಿ ರೇವ್‌ ಪಾರ್ಟಿ ನಡೆಯುತ್ತಿತ್ತು ಎಂಬುದು. ಆರ್ಯನ್‌ ಅವರ ಬಳಿ ಏನೂ ಇರಲಿಲ್ಲ. ಅವರು ಹೊಣೆಗಾರರಾಗಿರುವುದಿಲ್ಲ.‌ ರೇವ್‌ ಪಾರ್ಟಿ ಮೆಸೇಜ್‌ ಬಗ್ಗೆ ಫೋನ್‌ನಲ್ಲಿ ಏನೂ ಇಲ್ಲ” ಎಂದರು. ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಆರ್ಯನ್‌ ಖಾನ್‌ಗೆ ಜಾಮೀನು ನೀಡಬಹುದು ಎಂದು ಅವರು ನ್ಯಾಯಾಲಯವನ್ನು ಕೋರಿದರು.