cruise ship drug case
cruise ship drug case  
ಸುದ್ದಿಗಳು

ಕ್ರೂಸ್‌ ಹಡಗು ಡ್ರಗ್ಸ್ ಪ್ರಕರಣ: ಇನ್ನೂ ನಾಲ್ವರನ್ನು ಎನ್‌ಸಿಬಿ ವಶಕ್ಕೆ ನೀಡಿದ ಮುಂಬೈ ನ್ಯಾಯಾಲಯ

Bar & Bench

ಕ್ರೂಸ್‌ ಹಡಗು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇನ್ನೂ ನಾಲ್ವರನ್ನು ಮುಂಬೈನ ನ್ಯಾಯಾಲಯವೊಂದು ಅಕ್ಟೋಬರ್ 14 ರವರೆಗೆ ಎನ್‌ಸಿಬಿ ವಶಕ್ಕೆ ಒಪ್ಪಿಸಿದೆ. ಆ ಮೂಲಕ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 16 ಮಂದಿಯನ್ನುಎನ್‌ಸಿಬಿ ವಶಕ್ಕೆ ನೀಡಲಾಗಿದೆ.

ಗೋಪಾಲ್ ಆನಂದ್, ಸಮೀರ್ ಸೈಗಲ್, ಮಾನವ್ ಸಿಂಘಾಲ್ ಮತ್ತು ಭಾಸ್ಕರ್ ಅರೋರಾ ಎಂಬ ನಾಲ್ವರು ಆರೋಪಿಗಳನ್ನು ಹೊಸದಾಗಿ ಬಂಧಿಸಲಾಗಿತ್ತು. ಈ ನಾಲ್ವರು ವಿಲಾಸಿ ಹಡಗಿನಲ್ಲಿ ನಡೆದ ಪಾರ್ಟಿಯ ಸಂಘಟಕರು ಎನ್ನಲಾಗಿದೆ.

ಈ ಹಿಂದೆ, ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮೂನ್‌ಮೂನ್‌ ಧಮೇಚ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ, ಅಬ್ದುಲ್ ಖಾದಿರ್, ಶ್ರೇಯಸ್ ನಾಯರ್, ಮನೀಶ್ ರಾಜಗರಿಯಾ ಹಾಗೂ ಅವಿನ್ ಸಾಹು ಅವರನ್ನು ಎನ್‌ಸಿಬಿ ವಶಕ್ಕೆ ಒಪ್ಪಿಸಲಾಗಿತ್ತು.

ಆರ್ಯನ್ ಖಾನ್ ಮತ್ತು 7 ಮಂದಿಯನ್ನು ಅಕ್ಟೋಬರ್ 7, 2021 ರ ವರೆಗೆ ಎನ್‌ಸಿಬಿ ಕಸ್ಟಡಿಗೆ ಒಪ್ಪಿಸಿ ಸೋಮವಾರ ನ್ಯಾಯಾಲಯ ಆದೇಶ ಹೊರಡಿಸಿತ್ತು. ಮಂಗಳವಾರ, ಇನ್ನೂ ನಾಲ್ವರು ಆರೋಪಿಗಳನ್ನು ಅಕ್ಟೋಬರ್ 11, 2021ರವರೆಗೆ ಎನ್‌ಸಿಬಿ ವಶಕ್ಕೆ ನೀಡಲಾಗಿತ್ತು. ರೇವ್‌ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಡೆಲಿಯಾ ಕ್ರೂಸ್‌ನ ಎಂಪ್ರೆಸ್‌ ವಿಲಾಸಿ ಹಗಡಗಿನ ಮೇಲೆ ದಾಳಿ ನಡೆಸಿ ಹದಿನಾರು ಆರೋಪಿಗಳನ್ನು ಎನ್‌ಸಿಬಿ ಬಂಧಿಸಿತ್ತು.

ವಾದ ಆಲಿಸಿದ ಕಿಲ್ಲಾ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌ ಎಂ ನೇರ್ಳೀಕರ್‌ ಅವರು ನಾಲ್ವರನ್ನೂ ಅಕ್ಟೋಬರ್ 14 ರವರೆಗೆ ಎನ್‌ಸಿಬಿಗೆ ಕಸ್ಟಡಿ ನೀಡಿದರು. ಮಾದಕವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯ ಸೆಕ್ಷನ್ 8 (ಸಿ), 20 (ಬಿ), 27, 28, 29 ಮತ್ತು 35 ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.