ವಿಲಾಸಿ ಹಡಗಿನ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ಹಿನ್ನಲೆಯಲ್ಲಿ ಶನಿವಾರ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು.
ಆರ್ಯನ್‌ಗೆ ಗುರುವಾರವೇ ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರಿದ್ದ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದ್ದರೂ ಜಾಮೀನು ಷರತ್ತುಗಳನ್ನು ಶುಕ್ರವಾರ ಸಂಜೆ ವಿಧಿಸಲಾಗಿತ್ತು. ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ಒದಗಿಸುವಂತೆ ಸೂಚಿಸಲಾಗಿತ್ತು. ಎಲ್ಲ ಔಪಚಾರಿಕತೆಗಳು ಪೂರ್ಣಗೊಂಡಿದ್ದರಿಂದ ಆರ್ಯನ್ ಶನಿವಾರ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು.
ಶುಕ್ರವಾರ ಆರ್ಯನ್ ಪರ ವಕೀಲರು ಸೆಷನ್ಸ್ ನ್ಯಾಯಾಲಯಕ್ಕೆ ತೆರಳಿ ಜಾಮೀನು ಷರತ್ತಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದ್ದರು. ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಭದ್ರತೆಯ ಸಹಿ ಹಾಕಿದ್ದರು. ಜಾಮೀನು ಔಪಚಾರಿಕತೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಸಂಜೆ 5.30ರ ಒಳಗೆ ದಾಖಲೆಗಳನ್ನು ಜೈಲು ಅಧಿಕಾರಿಗಳಿಗೆ ತಲುಪಿಸಲು ತಡವಾದ್ದರಿಂದ ಆರ್ಯನ್ ಬಿಡುಗಡೆ ಇಂದಿಗೆ ಮುಂದೂಡಲ್ಪಟ್ಟಿತ್ತು.
ಮುಂಬೈನಿಂದ ಗೋವಾಕ್ಕೆ ಹೊರಟಿದ್ದ ವಿಲಾಸಿ ಹಡಗಿನ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿಯು ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 2ರಂದು ವಶಕ್ಕೆ ಪಡೆದಿತ್ತು. ಅಕ್ಟೋಬರ್ 3ರಂದು ಅಧಿಕೃತವಾಗಿ ಬಂಧಿಸಿದ್ದ ಎನ್‌ಸಿಬಿಯು ಆರ್ಯನ್ ವಿರುದ್ಧ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 8(ಸಿ), 20(ಬಿ), 27, 28, 29 ಮತ್ತು 35ರ ಪ್ರಕರಣ ದಾಖಲಿಸಿತ್ತು.
ಮೊದಲಿಗೆ ಆರ್ಯನ್ ಅವರನ್ನು ಅಕ್ಟೋಬರ್ 4ರವರೆಗೆ ಎನ್‌ಸಿಬಿ ವಶಕ್ಕೆ ನೀಡಿದ್ದು, ಬಳಿಕ ಬಂಧನ ಅವಧಿಯನ್ನು ಅಕ್ಟೋಬರ್ 7ಕ್ಕೆ ವಿಸ್ತರಿಸಲಾಗಿತ್ತು. ಆನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದಾದ ಬಳಿಕ ಆರ್ಯನ್ ಖಾನ್ ಅವರು ಜಾಮೀನು ಮನವಿ ಸಲ್ಲಿಸಿದ್ದರು.
ಮುಂಬೈನ ಸೆಷನ್ಸ್‌ನ ವಿಶೇಷ ನ್ಯಾಯಾಲಯ ಜಾಮೀನು ಮನವಿ ಆಲಿಸಬೇಕಿರುವುದರಿಂದ ಇಲ್ಲಿ ಸಲ್ಲಿಸಲಾಗಿರುವ ಅರ್ಜಿ ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಎಂ ನೆರ್ಲೀಕರ್ ಅದನ್ನು ವಜಾಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್ಯನ್ ಅವರು ಅಕ್ಟೋಬರ್ 20ರಂದು ವಿಶೇಷ ನ್ಯಾಯಾಲಯದಲ್ಲಿ ಮನವಿ ಸಲ್ಲಿದ್ದ ಅರ್ಜಿಯನ್ನು ಅಕ್ಟೋಬರ್ 20ರಂದು ತಿರಸ್ಕರಿಸಲಾಗಿತ್ತು. ಹೀಗಾಗಿ, ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಮೇಲ್ಮನವಿ ಸಲ್ಲಿಸಲಾಗಿತ್ತು.