CM Siddaramaiah, Minister Bharati Suresh & HC 
ಸುದ್ದಿಗಳು

ಮುಡಾ ಬ್ರಹ್ಮಾಂಡ ಭ್ರಷ್ಟಚಾರಕ್ಕೆ ಸಿಎಂ ಪತ್ನಿ ಪಾರ್ವತಿ ಯಾವುದೇ ರೀತಿಯಲ್ಲೂ ಜವಾಬ್ದಾರರಲ್ಲ: ಹೈಕೋರ್ಟ್‌ ಸ್ಪಷ್ಟ ನುಡಿ

ಸಚಿವ ಬೈರತಿ ಸುರೇಶ್‌ ಮತ್ತು ಪಾರ್ವತಿ ಅವರ ವಿರುದ್ಧ ಜಾರಿ ನಿರ್ದೇಶನಾಲಯವು ದಾಖಲಿಸಿರುವ ಇಸಿಐಆರ್‌ ಮತ್ತು ಸಮನ್ಸ್‌ ಅನ್ನು ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ. ಈ ಕುರಿತ ವಿಸ್ತೃತ ಆದೇಶ ಹೊರಬಿದ್ದಿದೆ.

Bar & Bench

“ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾರ್ವತಿ ಯಾವುದೇ ರೀತಿಯಲ್ಲೂ ಅದಕ್ಕೆ ಜವಾಬ್ದಾರರಲ್ಲ. ಅಲ್ಲದೇ, ಹಾಲಿ ಪ್ರಕರಣದಲ್ಲಿ ಯಾವುದೇ ರೀತಿ ಹಣ ವರ್ಗಾವಣೆಯಾಗಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ನುಡಿದಿದೆ.

ಜಾರಿ ನಿರ್ದೇಶನಾಲಯವು ದಾಖಲಿಸಿರುವ ಇಸಿಐಆರ್‌ ಮತ್ತು ಸಮನ್ಸ್‌ ರದ್ದುಪಡಿಸುವಂತೆ ಕೋರಿ ಪಾರ್ವತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈಚೆಗೆ ಪುರಸ್ಕರಿಸಿತ್ತು. ಈ ಕುರಿತ ವಿಸ್ತೃತ ಆದೇಶ ಹೊರಬಿದ್ದಿದೆ.

Justice M Nagaprasanna

“ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾರ್ವತಿ ಇದಕ್ಕೆ ಯಾವುದೇ ರೀತಿಯಲ್ಲೂ ಜವಾಬ್ದಾರರಲ್ಲ. ಇತರರ ವಿರುದ್ಧ ಸಂಗ್ರಹಿಸಿರುವ ಮಾಹಿತಿಯನ್ನು ಕಾನೂನಿನ ಅನ್ವಯ ಇ ಡಿಯು ಮುಂದುವರಿಸಬಹುದು. ಆದರೆ, ಅದನ್ನು ಪಾರ್ವತಿ ಅವರಿಗೆ ಹಂಚಿಕೆ ಮಾಡಿದ್ದ 14 ನಿವೇಶನಗಳಿಗೆ ಸಂಬಂಧಿಸಿದ ಪ್ರಕರಣಕ್ಕೆ ತಳಕು ಹಾಕಬಾರದು" ಎಂದು ನ್ಯಾಯಾಲಯ ಹೇಳಿದೆ.

ಮುಂದುವರೆದು, "ತನಿಖೆ, ಶೋಧ, ಜಫ್ತಿ ಮತ್ತು ಹೇಳಿಕೆ ದಾಖಲಿಕೆ ವೇಳೆ ಅರ್ಜಿದಾರರ ವಿರುದ್ಧ ಯಾವುದೇ ಅಂಶ ಪತ್ತೆಯಾಗಿಲ್ಲ. ಈ ನೆಲೆಯಲ್ಲಿ ಸಮನ್ವಯ ಪೀಠ ನೀಡಿರುವ ತೀರ್ಪಿನ ಅನ್ವಯ ಆಕ್ಷೇಪಾರ್ಹವಾದ ಇಸಿಐಆರ್‌ ಆಧರಿಸಿ ಅರ್ಜಿದಾರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕ್ರಿಯೆ ಮಂದುವರಿಸಲು ಅನುಮತಿಸಲಾಗದು ಎಂಬುದು ಈ ನ್ಯಾಯಾಲಯದ ಖಚಿತ ಅಭಿಪ್ರಾಯವಾಗಿದೆ. ಇದು 14 ನಿವೇಶನಗಳ ಹಂಚಿಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ತನಿಖೆಗೆ ಅನ್ವಯಿಸುವುದಿಲ್ಲ. ಆದ್ದರಿಂದ, ಅರ್ಜಿಯು ಊರ್ಜಿತವಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

“ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು ಇ ಡಿ ಸಮನ್ಸ್‌ ಅನ್ನು ಪ್ರಶ್ನಿಸಲಾಗದು. ಸಮನ್ಸ್‌ ಪ್ರಶ್ನಿಸಬಹುದು ಎಂದು ಯಾವುದೇ ಆದೇಶದಲ್ಲಿ ಹೇಳಲಾಗಿಲ್ಲ ಮತ್ತು ಅದನ್ನು ವಜಾ ಮಾಡಬೇಕು ಎಂದು ವಾದಿಸಿದ್ದಾರೆ. ನಟೇಶ್‌ ಪ್ರಕರಣದಲ್ಲಿಯೂ ಕಾಮತ್‌ ಅವರು ಇದೇ ನೆಲೆಯಲ್ಲಿ ವಾದಿಸಿದ್ದು, ಈ ಎಲ್ಲಾ ವಾದಗಳನ್ನು ಸಮನ್ವಯ ಪೀಠವು ನಟೇಶ್‌ ಪ್ರಕರಣದಲ್ಲಿ ಪರಿಗಣಿಸಿದೆ. ಈಗ ಮತ್ತದೇ ವಿಚಾರಗಳನ್ನು ಚರ್ಚಿಸುವುದು, ತೀರ್ಪನ್ನು ಲಂಬಿಸಿದಂತಾಗುತ್ತದೆ. ಹೀಗಾಗಿ, ಸಮನ್ವಯ ಪೀಠದ ಆದೇಶವನ್ನು ಪಾಲಿಸಲು ಈ ನ್ಯಾಯಾಲಯ ಬಯಸುತ್ತದೆ” ಎಂದು ಹೇಳಲಾಗಿದೆ.

“ಪಿಎಂಎಲ್‌ಎ ಸೆಕ್ಷನ್‌ 3ರಲ್ಲಿ ಉಲ್ಲೇಖಿತ ಅಂಶಗಳು ಇವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಸೆಕ್ಷನ್‌ 3ರ ಪ್ರಕಾರ ಆಸ್ತಿ ಅಥವಾ ನಿಧಿಯಾಗಿರಬಹುದು ಅದು ಅಪರಾಧವಾಗಬೇಕಾದರೆ ಅದು ಆರೋಪಿಯ ವಶದಲ್ಲಿರಬೇಕು, ಬಚ್ಚಿಟ್ಟಿರಬೇಕು, ಅನುಭವದಲ್ಲಿರಬೇಕು. ಅದು ಅಪರಾಧ ಪ್ರಕ್ರಿಯೆಯಿಂದ ಬಂದಿರಬೇಕು ಎಂದು ಸಮನ್ವಯ ಪೀಠ ಹೇಳಿದೆ. ನಟೇಶ್‌ ಪ್ರಕರಣದಲ್ಲಿ ಸಮನ್ವಯ ಪೀಠವು ನಟೇಶ್‌ ಪರವಾಗಿ ಆದೇಶ ಮಾಡಿದೆ. ಕಾಯಿದೆಯ ಅಡಿ ಮೇಲ್ನೋಟಕ್ಕೆ ಪ್ರಕರಣ ಇದೆ ಎಂದು ಸಾಬೀತುಪಡಿಸದಿದ್ದರೆ, ಶೋಧ ಮತ್ತು ಜಫ್ತಿಯ ಸಂದರ್ಭದಲ್ಲಿ ಆಕ್ಷೇಪಾರ್ಹವಾದ ವಸ್ತುಗಳು ಪತ್ತೆಯಾಗದಿದ್ದರೆ ಸಮನ್ಸ್‌ ಜಾರಿ ಮಾಡಿರುವುದಕ್ಕೆ ಕಾನೂನಿನ ಬೆಂಬಲ ಇರುವುದಿಲ್ಲ ಎಂದು ಸಮನ್ವಯ ಪೀಠ ಹೇಳಿದೆ. ಆ ಸಂದರ್ಭದಲ್ಲಿ ಅರ್ಜಿದಾರರು ತನಿಖಾ ಸಂಸ್ಥೆಯ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕಿಲ್ಲ. ಏಕೆಂದರೆ ಅದು ಅವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ ಹರಣ ಮಾಡಿದಂತಾಗಲಿದೆ ಎಂದು ಸಮನ್ವಯ ಪೀಠ ಹೇಳಿದೆ. ನಟೇಶ್‌ ಪ್ರಕರಣದಲ್ಲಿ ನಟೇಶ್‌ ಆರೋಪಿಯಾಗಿರಲಿಲ್ಲ. ಆದರೂ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿತ್ತು” ಎಂದು ಹೇಳಲಾಗಿದೆ.

“ಹಾಲಿ ಪ್ರಕರಣದಲ್ಲಿ ಪಾರ್ವತಿ ಅವರು ಪ್ರೆಡಿಕೇಟ್‌ ಅಪರಾಧದಲ್ಲಿ (ಸಂಪತ್ತಿನ ಅಕ್ರಮ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಆರೋಪಿಯಾಗಿದ್ದಾರೆ. ಜಮೀನಿಗೆ ಪರಿಹಾರದ ಭಾಗವಾಗಿ 14 ನಿವೇಶನಗಳನ್ನು ಮಂಜೂರು ಮಾಡಿರುವುದು ಅಪರಾಧ ಪ್ರಕ್ರಿಯೆಯಾಗಿದೆ. ಸಂಬಂಧಿತ ಕಾನೂನಿನ ಅನ್ವಯ ಪರಿಹಾರದ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಅರ್ಜಿದಾರರು ಮತ್ತು ಇತರೆ ಆರೋಪಿಗಳು ಅಪರಾಧಿಗಳೇ ಎಂಬುದನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇ ಡಿಯು ಪ್ರಕರಣ ದಾಖಲಿಸುವ ವೇಳೆಗೆ ಪಾರ್ವತಿ ಅವರ ಬಳಿ ನಿವೇಶನಗಳು ಇರಲಿಲ್ಲ. ಅವುಗಳು ಅವರ ಸ್ವಾಧೀನಾನುಭವದಲ್ಲಿಲ್ಲ. ಅವುಗಳನ್ನು ಮುಡಾಗೆ ಮರಳಿಸಿದ್ದು, ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಹೀಗಾಗಿ, ಅಕ್ರಮ ಹಣ ವರ್ಗಾವಣೆ ಆಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಸುರೇಶ್‌ಗೆ ಸಮನ್ಸ್‌ ನೀಡಿರುವುದು ಏಕೆ ಎಂದು ಅರ್ಥವಾಗಿಲ್ಲ

ಸುರೇಶ್‌ ಅವರಿಗೆ ಮುಡಾದಲ್ಲಿ ಏನಾಗಿದೆ ಎಂಬುದೇ ತಿಳಿದಿಲ್ಲ. 2023ರಲ್ಲಿ ಸಚಿವರಾದ ನಂತರ ಅವರು ಪ್ರಕರಣದ ಭೂಮಿಕೆಗೆ ಬಂದಿದ್ದಾರೆ. ಹೀಗಾಗಿ, ಸುರೇಶ್‌ಗೆ ಸಮನ್ಸ್‌ ಜಾರಿ ಮಾಡಲು ಮೇಲ್ನೋಟಕ್ಕೆ ಇ ಡಿಯು ಯಾವುದೇ ಪ್ರಕರಣವನ್ನು ತೋರಿಸಿಲ್ಲ. ಸಮನ್ಸ್‌ ಜಾರಿ ಮಾಡುವುದಕ್ಕೆ ನಿಲ್ಲದ ಇ ಡಿಯು ಅರ್ಜಿದಾರರರು, ಅವರ ಕುಟುಂಬದವರು ಮತ್ತು ಅವರ ಸಮೀಪವರ್ತಿಗಳ ಆರ್ಥಿಕ ವಿಚಾರ ಕೆದಕಲು ಮುಂದಾಗಿರುವುದು ಅರ್ಜಿದಾರರ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸುರೇಶ್‌ ಅವರು ನಗರಾಭಿವೃದ್ಧಿ ಸಚಿವರಾಗುವುದಕ್ಕೂ 15 ವರ್ಷಗಳ ಹಿಂದೆಯೇ ನಿವೇಶನಗಳ ಹಂಚಿಕೆ ಪ್ರಕ್ರಿಯೆ ನಡೆದಿದೆ. ಸಮನ್ಸ್‌ ಮತ್ತು ಪ್ರಶ್ನೋತ್ತರ ಮಾಲೆಗೆ ಅವರನ್ನು ಉತ್ತರಿಸುವಂತೆ ಸೂಚಿಸುವುದಕ್ಕೆ ಕಾನೂನಿನಲ್ಲಿ ಅನುಮತಿ ಇಲ್ಲ. ಸಮನ್ವಯ ಪೀಠವು ನಟೇಶ್‌ ಪ್ರಕರಣದಲ್ಲಿ ಅದನ್ನು ಪರಿಗಣಿಸಿದೆ. ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿರುವ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅವರ ಪಾತ್ರ ಇಲ್ಲ. ಹೀಗಾಗಿ, ಸುರೇಶ್‌ ವಿರುದ್ಧ ಇಸಿಐಆರ್‌ ದಾಖಲಿಸಿರುವುದು ನಿಸ್ಸಂಶಯವಾಗಿ ಕಾನೂನಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಸಮನ್ಸ್‌ ಅನ್ನು ಪ್ರಶ್ನಿಸಲಾಗದು. ಯಾರಿಗೆ ಸಮನ್ಸ್‌ ನೀಡಲಾಗುತ್ತದೆ ಅವರು ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕು ಎಂಬ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರ ವಾದವನ್ನು ಒಪ್ಪಲು ಕಷ್ಟವಾಗುತ್ತದೆ. ಸಾಮಾನ್ಯ ಸಂದರ್ಭದಲ್ಲಿ ಇದಕ್ಕೆ ಅನುಮತಿ ಇರಬಹುದು. ಆದರೆ, ಹಾಲಿ ಪ್ರಕರಣದಲ್ಲಿ ಸುರೇಶ್‌ ಅವರು ಯಾವುದೇ ರೀತಿಯಲ್ಲಿಯೂ ಸಂಬಂಧಿತರಲ್ಲ. ಹೀಗಾಗಿ, ಸಮನ್ಸ್‌ಗೆ ಅನುಮತಿಸುವುದು ಕಷ್ಟವಾಗುತ್ತದೆ. ಸುರೇಶ್ ಅವರ ಪ್ರವೇಶಕ್ಕೂ ಮುನ್ನವೇ ತನಿಖೆ, ಶೋಧ, ಜಫ್ತಿ ನಡೆದಿರುವುದರಿಂದ ಸುರೇಶ್‌ಗೆ ಏಕೆ ಸಮನ್ಸ್‌ ನೀಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

Parvathi Vs ED.pdf
Preview
B S Suresh Vs ED.pdf
Preview