A1
ಸುದ್ದಿಗಳು

ಕೆಲ ಕೆಳ ಹಂತದ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ಶೋಚನೀಯವಾಗಿದೆ: ಕೇಂದ್ರ ಕಾನೂನು ಸಚಿವ ರಿಜಿಜು

ಭಾರತದ ನ್ಯಾಯಾಲಯಗಳು ಶೀಘ್ರದಲ್ಲೇ ಕಾಗದರಹಿತವಾಗಬೇಕಿದ್ದು ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಕ್ರಮವಹಿಸಬೇಕು ಎಂದು ರಿಜಿಜು ಮನವಿ ಮಾಡಿದರು.

Bar & Bench

ದೇಶದ ವಿವಿಧ ನ್ಯಾಯಾಲಯಗಳಲ್ಲಿ ಅದರಲ್ಲಿಯೂ ಕೆಳ ಹಂತದ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಸ್ಥಿತಿ ದಯನೀಯವಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಮಂಗಳವಾರ ವಿಷಾದ ವ್ಯಕ್ತಪಡಿಸಿದರು.

ದೆಹಲಿ ಹೈಕೋರ್ಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ 'ಎಸ್' ಬ್ಲಾಕ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿವಿಧ ನ್ಯಾಯಾಲಯಗಳಿಗೆ ಇತ್ತೀಚಿಗೆ ತಾನು ಭೇಟಿ ನೀಡಿದ ವೇಳೆ  ಕಂಡುಕೊಂಡ ಸಂಗತಿಗಳನ್ನು ಪ್ರಸ್ತಾಪಿಸಿದ ಅವರು ಕೆಲವು ನ್ಯಾಯಾಲಯಗಳಲ್ಲಿ ಸೂಕ್ತ ಮೂಲಸೌಕರ್ಯ ಇದೆ ಉಳಿದವು ಹಿಂದುಳಿದಿವೆ. ಈ ಬಗ್ಗೆ ನಾಚಿಕೆಯಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಮೂಲಸೌಕರ್ಯಗಳ ಸಮಸ್ಯೆಯನ್ನು ನಿಭಾಯಿಸಲು ನ್ಯಾಯಮೂರ್ತಿಯೊಬ್ಬರನ್ನು ನೇಮಿಸಿರುವ ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ಪತ್ರವನ್ನು ರಿಜಿಜು ಪ್ರಸ್ತಾಪಿಸಿದರು.

ಮೂಲಸೌಕರ್ಯ ಸಮಸ್ಯೆಯ ಬಗ್ಗೆಯೂ ಸಮಿತಿ  ರಚಿಸುವಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಕಾನೂನು ಸಚಿವರು ಕೇಳಿಕೊಂಡರು.

ಭಾರತದ ನ್ಯಾಯಾಲಯಗಳು ಶೀಘ್ರದಲ್ಲೇ ಕಾಗದರಹಿತವಾಗಬೇಕಿದ್ದು ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಕ್ರಮವಹಿಸಬೇಕು ಎಂದು ರಿಜಿಜು ಮನವಿ ಮಾಡಿದರು.     

“ಇ- ನ್ಯಾಯಾಲಯಗಳನ್ನು ಅಸ್ತಿತ್ವಕ್ಕೆ ತರುವ ಕಾರ್ಯ ಸಿಜೆಐ ಅವರ ಅಧಿಕಾರ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂದು ನಾನು ವಿನಂತಿಸುತ್ತೇನೆ. ಶೀಘ್ರದಲ್ಲೇ ಭಾರತೀಯ ನ್ಯಾಯಾಂಗ ಕಾಗದರಹಿತವಾಗಬೇಕು” ಎಂದರು.

ಜೊತೆಗೆ "ದೆಹಲಿಯಲ್ಲಿ ಬಹುಶಃ ಅತ್ಯಧಿಕ ಸಂಖ್ಯೆಯ ವಕೀಲರಿದ್ದಾರೆ. ನಾನು ತೀಸ್ ಹಜಾರಿ ನ್ಯಾಯಾಲಯಕ್ಕೆ ಹೋದಾಗ, ಅದು ಸಮಾವೇಶವೊಂದರಂತೆ ಭಾಸವಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದಿಂದ ನಾವು ಕನಿಷ್ಠ ಅರ್ಧದಷ್ಟು ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ನನಗೆ ಖಾತ್ರಿಯಿದೆ." ಎಂಬುದಾಗಿ ತಿಳಿಸಿದರು.

ಅಲ್ಲದೆ  “ಬಾಕಿ ಇರುವ ಪ್ರಕರಣಗಳ ಸಂಖ್ಯೆ ಶೀಘ್ರದಲ್ಲೇ 5 ಕೋಟಿ ತಲುಪಲಿದೆ. ಒಂದೇ ಚಿಟಿಕೆಯಲ್ಲಿ ಎಲ್ಲವನ್ನೂ ನಿಭಾಯಿಸಬಲ್ಲ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಬೇಕು” ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.

CJI DY Chandrachud

ನ್ಯಾಯಾಲಯಗಳು ಭಯಪಡುವ ತಾಣಗಳಲ್ಲ

ಇದೇ ವೇಳೆ ಮಾತನಾಡಿದ ಸಿಜೆಐ ಚಂದ್ರಚೂಡ್‌ ವಸಾಹತುಶಾಹಿ ಆಳ್ವಿಕೆಯಲ್ಲಿ ನಿರ್ಮಿಸಲಾದ ನ್ಯಾಯಾಲಯ ಸಂಕೀರ್ಣಗಳು ದಾವೆದಾರರಲ್ಲಿ ಭಯದ  ವಾತಾವರಣ ಸೃಷ್ಟಿಸುವಂತಿದ್ದವು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ ಎಂದು ತಿಳಿಸಿದರು.

“ಆ ಜಾಗಗಳು ಈಗ ಸಾರ್ವಜನಿಕ ಮತ್ತು ನಾಗರಿಕ ಸ್ಥಳಗಳಾಗಿವೆ. ಎಸ್ ಬ್ಲಾಕ್‌ನ ಭವ್ಯಕಟ್ಟಡದಲ್ಲಿ 200 ಕೋಣೆಗಳಿದ್ದು ದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ ಮತ್ತು ಸಾಮಾನ್ಯ ಜನರಿಗೆ ಸ್ಥಳಾವಕಾಶವನ್ನು ಒದಗಿಸುತ್ತದೆ" ಎಂದು ಅವರು ಹೇಳಿದರು.