(ಎಡದಿಂದ ಬಲಕ್ಕೆ) ನ್ಯಾಯಮೂರ್ತಿಗಳಾದ  ಮಿತ್ತಲ್‌, ಓಕಾ, ಸಿಜೆಐ ಚಂದ್ರಚೂಡ್,  ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ
(ಎಡದಿಂದ ಬಲಕ್ಕೆ) ನ್ಯಾಯಮೂರ್ತಿಗಳಾದ ಮಿತ್ತಲ್‌, ಓಕಾ, ಸಿಜೆಐ ಚಂದ್ರಚೂಡ್, ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ 
ಸುದ್ದಿಗಳು

ತಡೆಯಾಜ್ಞೆ 6 ತಿಂಗಳ ಬಳಿಕ ತನ್ನಷ್ಟಕ್ಕೇ ತೆರವಾಗುವ ಕುರಿತಾದ ಆದೇಶದ ವಿರುದ್ಧ ಆಕ್ಷೇಪ: ತೀರ್ಪು ಕಾಯ್ದಿರಿಸಿದ ಸುಪ್ರೀಂ

Bar & Bench

ಕ್ರಿಮಿನಲ್ ಮತ್ತು ಸಿವಿಲ್ ವಿಚಾರಣೆಗಳಲ್ಲಿನ ಎಲ್ಲಾ ತಡೆಯಾಜ್ಞೆಗಳು ನಿರ್ದಿಷ್ಟವಾಗಿ ವಿಸ್ತರಣೆಯಾಗದ ಹೊರತು ಆರು ತಿಂಗಳವರೆಗೆ ಮಾತ್ರವೇ ಮಾನ್ಯವಾಗಿರಲಿವೆಯೇ ಎನ್ನುವ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ಕಾಯ್ದಿರಿಸಿದೆ (ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಸಂಘ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ)

ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ, ಜೆ ಬಿ ಪರ್ದಿವಾಲಾ, ಪಂಕಜ್ ಮಿತ್ತಲ್‌ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತೀರ್ಪನ್ನು ಕಾಯ್ದಿರಿಸಿತು.

ವಿಶೇಷವೆಂದರೆ, ತಡೆಯಾಜ್ಞೆ ಆದೇಶಗಳು ಸ್ವಯಂಚಾಲಿತವಾಗಿ ತೆರವಾಗುವುದನ್ನು ಹಾಜರಿದ್ದ ಯಾವುದೇ ವಕೀಲರು ಬೆಂಬಲಿಸಲಿಲ್ಲ.

ಏಷ್ಯನ್ ರಿಸರ್ಫೇಸಿಂಗ್ ಆಫ್ ರೋಡ್ ಏಜೆನ್ಸಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಡುವಣ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದ ವೇಳೆ ಈ ಪ್ರಶ್ನೆ ಉದ್ಭವವಾಗಿತ್ತು.

ಉನ್ನತ ನ್ಯಾಯಾಲಯದ ಮೂವರು ನ್ಯಾಯಮೂರ್ತಿಗಳ ಪೀಠ 2018ರ ತೀರ್ಪಿನಲ್ಲಿ, ಕ್ರಿಮಿನಲ್ ಮತ್ತು ಸಿವಿಲ್ ವಿಚಾರಣೆಗಳಲ್ಲಿನ ಎಲ್ಲಾ ತಡೆಯಾಜ್ಞೆಗಳು ನಿರ್ದಿಷ್ಟವಾಗಿ ವಿಸ್ತರಿಸದ ಹೊರತು ಆರು ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು ನಿರ್ದೇಶಿಸಿತ್ತು.

ಈಚೆಗೆ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ನ್ಯಾಯಾಲಯ, ತಡೆಯಾಜ್ಞೆಗಳನ್ನು ಅತಿಯಾಗಿ ವಿಸ್ತರಿಸುವಲ್ಲಿನ ನ್ಯೂನತೆಗಳನ್ನು ಸಹ ಒಪ್ಪಿಕೊಂಡಿತ್ತು.

ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅಥವಾ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ತನಗೆ ಸಹಾಯ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.

ಇಂದು ವಿಚಾರಣೆಯ ಸಮಯದಲ್ಲಿ, ಸಿಜೆಐ ಚಂದ್ರಚೂಡ್ ಅವರು 2018ರ ತೀರ್ಪು ಏಕೆ ಬಂದಿದ್ದೆಂದರೆ ಕೆಲವು ಹೈಕೋರ್ಟ್‌ಗಳು ನೀಡುತ್ತಿದ್ದ ತಡೆಯಾಜ್ಞೆಗಳು ದಶಕಗಳ ಕಾಲ ಮುಂದುವರಿಯುತ್ತಿದ್ದವು. ಇದು ಬೃಹತ್‌ ಹೈಕೋರ್ಟ್‌ಗಳಲ್ಲಿ ಪ್ರಕರಣಗಳ ವಿಲೇವಾರಿಗೆ ತೀವ್ರ ಸಮಸ್ಯೆಗೆ ಕಾರಣವಾಗುತ್ತದೆ. ಅಂತಿಮವಾಗಿ ವ್ಯಾಜ್ಯಕಾರರು ತೊಂದರೆಗೀಡಾಗುತ್ತಾರೆ, ತಪ್ಪಿತಸ್ಥರು ಇದರ ಲಾಭ ಪಡೆಯುತ್ತಾರೆ ಎಂದು ಅವರು ವಿವರಿಸಿದರು.

ಹಿರಿಯ ವಕೀಲ ರಾಕೇಶ್‌ ದ್ವಿವೇದಿ, ಸಾಲಿಸಿಟರ್‌ ಜನರಲ್‌ ಮೆಹ್ತಾ, ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ವಾದ ಮಂಡಿಸಿದರು.