ಸುದ್ದಿಗಳು

ಕೆಎಎಸ್‌ ಪೂರ್ವಭಾವಿ ಪರೀಕ್ಷೆ ರದ್ದತಿಗೆ ಮನವಿ: ರಾಜ್ಯ ಸರ್ಕಾರ, ಕೆಪಿಎಸ್‌ಸಿಗೆ ಕೆಎಸ್‌ಎಟಿ ನೋಟಿಸ್‌

ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆ ಕೋರಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆಯೂ ಜನವರಿ 30ರಂದು ವಿಚಾರಣೆಗೆ ನಿಗದಿಯಾಗಿದೆ.

Bar & Bench

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಳೆದ ಡಿಸೆಂಬರ್‌ 29ರಂದು 384 ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ಪ್ರೊಬೇಷನರ್ಸ್‌ ಹುದ್ದೆಗಳ ಭರ್ತಿಗೆ ನಡೆಸಿದ ಪೂರ್ವಭಾವಿ ಮರು ಪರೀಕ್ಷೆಯಲ್ಲಿ ದೋಷಗಳಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಕೋರಿ ಹಲವು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣವು (ಕೆಎಸ್‌ಎಟಿ) ರಾಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿಗೆ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ಕೃಷ್ಣ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಂಗ ಸದಸ್ಯರಾದ ಎಸ್‌ ವೈ ವಟವಟಿ ಮತ್ತು ಆಡಳಿತ ಸದಸ್ಯೆ ಡಾ.ಅಮಿತಾ ಪ್ರಸಾದ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠವು “ಕೆಪಿಎಸ್‌ಸಿಯ ಅಭಿಪ್ರಾಯ ಆಲಿಸದೆ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ” ಎಂದಿತು. ರಾಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿಗೆ ನೋಟಿಸ್‌ ಜಾರಿಗೊಳಿಸಿ, ಮುಂದಿನ ವಿಚಾರಣೆ ವೇಳೆಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತು. ಅಲ್ಲದೇ, ಮುಂದಿನ ವಿಚಾರಣೆವರೆಗೆ ಪರೀಕ್ಷೆ ಸಂಬಂಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೆಪಿಎಸ್‌ಸಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲರು “ಪೂರ್ವಭಾವಿ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಅನುವಾದದಲ್ಲಿ ಮತ್ತೆ ಲೋಪಗಳಾಗಿವೆ. ಇದರಿಂದಾಗಿ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಪ್ರದೇಶದ ಅನ್ಯಾಯವಾಗುತ್ತಿದೆ. ಹಾಗಾಗಿ ಪರೀಕ್ಷೆಯನ್ನು ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸಲು ನಿರ್ದೇಶನ ನೀಡಬೇಕು. ಮಧ್ಯಂತರ ಕ್ರಮವಾಗಿ ಫಲಿತಾಂಶ ಪ್ರಕಟಣೆಗೆ ತಡೆ ನೀಡಬೇಕು” ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ಕಳೆದ ಆಗಸ್ಟ್‌ 27ರಂದು ಕೆಪಿಎಸ್‌ಸಿ 384 ಕೆಎಎಸ್‌ ಹುದ್ದೆಗಳ ನೇಮಕಕ್ಕೆ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಅದರಲ್ಲಿ 2.10 ಲಕ್ಷ ಅರ್ಜಿ ಸಲ್ಲಿಸಿದ್ದವರ ಪೈಕಿ 1.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಪರೀಕ್ಷೆಯ ಪ್ರಶ್ನೆ ಪತ್ರಿಕೆ ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ಲೋಪಗಳು ಉಂಟಾದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಳಿಸುವಂತೆ ಅಭ್ಯರ್ಥಿಗಳು ಆಯೋಗದ ಮೇಲೆ ಒತ್ತಡ ಹಾಕಿದ್ದರು. ಕೊನೆಗೆ ಸರ್ಕಾರವೇ ಆಯೋಗಕ್ಕೆ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ಬರೆಯಲು ಆದೇಶ ನೀಡಿತ್ತು.

ಅದರಂತೆ ಆಯೋಗ ಡಿಸೆಂಬರ್‌ 29ಕ್ಕೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ 553 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿತ್ತು. 2.10 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 1.05 ಲಕ್ಷ (ಶೇ.47.7) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಆಯೋಗ ತಿಳಿಸಿದೆ. ಅ ಪರೀಕ್ಷೆಯಲ್ಲೂಸಹ ಸುಮಾರು 59 ಪ್ರಶ್ನೆಗಳ ಅನುವಾದದಲ್ಲಿ ದೋಷಗಳಾಗಿವೆ. ಹೀಗಾಗಿ, ಪರೀಕ್ಷೆ ರದ್ದುಗೊಳಿಸಬೇಕು ಎಂದು ಅಭ್ಯರ್ಥಿಗಳು ಕೋರಿದ್ದಾರೆ.

ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆ ಕೋರಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆಯೂ ಜನವರಿ 30ರಂದು ವಿಚಾರಣೆಗೆ ನಿಗದಿಯಾಗಿದೆ.