Himanta Biswa Sarma with Gauthati High Court facebook
ಸುದ್ದಿಗಳು

ಹೈಕೋರ್ಟ್ ಸ್ಥಳಾಂತರ: ಗೌಹಾಟಿ ಹೈಕೋರ್ಟ್ ವಕೀಲರ ಸಂಘದ ಸದಸ್ಯತ್ವಕ್ಕೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ರಾಜೀನಾಮೆ

ಈ ಹಿಂದೆ, ರಾಜ್ಯದ ಅಡ್ವೊಕೇಟ್ ಜನರಲ್ ದೇವಜಿತ್ ಸೈಕಿಯಾ ಕೂಡ ವಕೀಲರ ಸಂಘಕ್ಕೆ ರಾಜೀನಾಮೆ ನೀಡಿದ್ದರು. ಹೈಕೋರ್ಟ್ ಸ್ಥಳಾಂತರಿಸುವ ಕ್ರಮವನ್ನು ವಿರೋಧಿಸುತ್ತಿರುವ ವಕೀಲರ ಸಂಘವು ಹೈಕೋರ್ಟ್‌ ಮತ್ತು ಸರ್ಕಾರದೊಂದಿಗೆ ಸಂಘರ್ಷದ ಹಾದಿಯಲ್ಲಿದೆ.

Bar & Bench

ಅಸ್ಸಾಂನ ಹೈಕೋರ್ಟ್ ಸಂಕೀರ್ಣವನ್ನು ಅದು ಪ್ರಸ್ತುತ ಇರುವ ಸ್ಥಳದಿಂದ ಉತ್ತರ ಗುವಾಹಟಿಯ ರಂಗಮಹಲ್‌ನಲ್ಲಿರುವ ಪ್ರಸ್ತಾವಿತ ನ್ಯಾಯಾಂಗ ಟೌನ್‌ಶಿಪ್‌ಗೆ ಸ್ಥಳಾಂತರಿಸುವ ಕ್ರಮವನ್ನು ಪ್ರತಿಭಟಿಸಿರುವ ವಕೀಲರ ಸಂಘಟನೆಗಳ ನಿರ್ಧಾರವನ್ನು ವಿರೋಧಿಸಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಗುವಾಹಟಿ ಹೈಕೋರ್ಟ್ ವಕೀಲರ ಸಂಘದ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಹೈಕೋರ್ಟ್‌ ವಕೀಲರ ಸಂಘದ ​​ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಶರ್ಮಾ ಅವರು 1994 ರಿಂದ 2001ರ ವರೆಗೆ ತಾನು ಕಾನೂನು ವೃತ್ತಿಯಲ್ಲಿ ಸಕ್ರಿಯನಾಗಿದ್ದೆ ಹಾಗೂ ಸಂಘದ ಸದಸ್ಯನಾಗಿದ್ದೆ ಎಂದು ಹೇಳಿದ್ದಾರೆ.

ಪ್ರಸಕ್ತ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಲು ಮಾತ್ರವಲ್ಲದೆ ನ್ಯಾಯಾಂಗ ಸುಧಾರಣೆ, ಸಾಂಸ್ಥಿಕ ಬೆಳವಣಿಗೆ ಮತ್ತು ಕಾನೂನು ವ್ಯವಸ್ಥೆಯ ಭವಿಷ್ಯದ ವಿಶಾಲ ಹಿತಾಸಕ್ತಿಯ ದೃಷ್ಟಿಯಿಂದ ತಾವು ಸದಸ್ಯತ್ವವನ್ನು ತ್ಯಜಿಸುತ್ತಿರುವುದಾಗಿ ಅವರು ವಿವರಿಸಿದ್ದಾರೆ.

"ಗೌಹಾಟಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ​​ತಳೆದಿರುವ ಪ್ರಸ್ತುತ ನಿಲುವನ್ನು ಪರಿಗಣಿಸಿದರೆ, ಇದು ಗೌರವಾನ್ವಿತ ಹೈಕೋರ್ಟ್ ಮತ್ತು ಅಸ್ಸಾಂ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ. ಪೂರ್ಣ ನ್ಯಾಯಾಲಯದ ನಿರ್ಧಾರಕ್ಕೆ ವಿರುದ್ಧವಾದ ತೀರ್ಮಾನದೊಂದಿಗೆ ನಾನು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ ನೈತಿಕವಾಗಿ ಕಠಿಣ ಪರಿಸ್ಥಿತಿಯಲ್ಲಿದ್ದೇನೆ. ಹಾಗಾಗಿ, ಎಲ್ಲಾ ಗೌರವಾದರಗಳೊಂದಿಗೆ ತಿಳಿಸುವುದೇನೆಂದರೆ ಈ ಪತ್ರ ತಲುಪಿದ ಕ್ಷಣದಿಂದ ಜಾರಿಗೆ ಬರುವಂತೆ ಗೌಹಾಟಿ ಹೈಕೋರ್ಟ್‌ನ ವಕೀಲರ ಸಂಘದ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ಸ್ವೀಕರಿಸುವಂತೆ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ" ಎಂದು ಶರ್ಮಾ ಪತ್ರದಲ್ಲಿ ಬರೆದಿದ್ದಾರೆ.

ಈ ಹಿಂದೆ, ರಾಜ್ಯದ ಅಡ್ವೊಕೇಟ್ ಜನರಲ್ (ಎಜಿ) ದೇವಜಿತ್ ಸೈಕಿಯಾ ಕೂಡ ವಕೀಲರ ಸಂಘಕ್ಕೆ ರಾಜೀನಾಮೆ ನೀಡಿದ್ದರು. ಹೈಕೋರ್ಟ್ ಅನ್ನು ಸ್ಥಳಾಂತರಿಸುವ ಕ್ರಮವನ್ನು ವಿರೋಧಿಸುತ್ತಿರುವ ವಕೀಲರ ಸಂಘವು ಹೈಕೋರ್ಟ್‌ ಮತ್ತು ಸರ್ಕಾರದೊಂದಿಗೆ ಸಂಘರ್ಷದ ಹಾದಿಯಲ್ಲಿದೆ. ಇದು ಹೈಕೋರ್ಟ್‌ನ ವಕೀಲರು ಮತ್ತು ಪೀಠದ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ.

ಸೈಕಿಯಾ ಸಲ್ಲಿಸಿದ್ದ ಎರಡು ಅರ್ಜಿಗಳ ಮೇರೆಗೆ, ಕಳೆದ ತಿಂಗಳು ಹೈಕೋರ್ಟ್, ಗೌಹಾಟಿ ಹೈಕೋರ್ಟ್‌ನ ವಕೀಲರ ಸಂಘದ ​​ಅಧ್ಯಕ್ಷ (ಜಿಎಚ್‌ಸಿಬಿಎ) ಕಮಲ್ ನಯನ್ ಚೌಧರಿ ಸೇರಿದಂತೆ ಮೂವರು ವಕೀಲರಿಗೆ ನ್ಯಾಯಾಂಗ ನಿಂದನೆ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿತ್ತು. ಸಂಘವು ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಮಾಡಿದ ಟೀಕೆಗಳಿಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಂಡಿತ್ತು.

ಆನಂತರ ಚೌಧರಿ ವಿರುದ್ಧದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿಯಿತು. ಆದರೆ, ಹಿರಿಯ ವಕೀಲರೊಬ್ಬರು ಸೇರಿದಂತೆ ಇಬ್ಬರು ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಂದುವರಿಸಲು ಅವಕಾಶ ನೀಡಿತು.

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶರ್ಮಾ ಅವರು ಹೈಕೋರ್ಟ್ ಅನ್ನು ಸ್ಥಳಾಂತರಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ವಿವರಿಸಲು ಪ್ರಯತ್ನಿಸಿದ್ದರು.

ಅವರ ಪತ್ರವು ಈ ಕೆಳಗಿನ ಅಂಶಗಳನ್ನು ಪ್ರಮುಖವಾಗಿ ಉಲ್ಲೇಖಿಸಿತ್ತು:

1. ನಗರದ ಹೃದಯಭಾಗದಲ್ಲಿರುವ ಪ್ರಸ್ತುತ ಹೈಕೋರ್ಟ್ ಸಂಕೀರ್ಣಕ್ಕೆ ಹೆಚ್ಚಿನ ವಿಸ್ತರಣೆಗೆ ಅವಕಾಶವಿಲ್ಲ.

2. ವಕೀಲರು, ದಾವೆ ಹೂಡುವವರು ಮತ್ತು ನೋಂದಾಯಿತ ಸದಸ್ಯರಿಗೆ ಪಾರ್ಕಿಂಗ್ ಸೌಲಭ್ಯಗಳು ತೀರಾ ಅಸಮರ್ಪಕವಾಗಿವೆ. ಅಸ್ತಿತ್ವದಲ್ಲಿರುವ ಪಾರ್ಕಿಂಗ್ ಪ್ರದೇಶಗಳನ್ನು ವಿಸ್ತರಿಸಲು ಯಾವುದೇ ಅವಕಾಶವಿಲ್ಲ.

3. ಪ್ರಧಾನ ಪೀಠದಲ್ಲಿರುವ ನ್ಯಾಯಮೂರ್ತಿಗಳ ಬಲವನ್ನು ಪ್ರಸ್ತುತ ಇರುವ 22 ರಿಂದ 30ಕ್ಕೆ ಹೆಚ್ಚಿಸುವ ಸಾಧ್ಯತೆ ಇದ್ದು ಸರ್ಕಾರವು ಅಸ್ತಿತ್ವದಲ್ಲಿರುವ ಆವರಣದಲ್ಲಿ ಅಗತ್ಯವಿರುವ ಹೆಚ್ಚುವರಿ ಸ್ಥಳವನ್ನು ಒದಗಿಸಲು ಸಾಧ್ಯವಾಗುವುದಿಲ್ಲ.

4. ಆಧುನಿಕ ಗ್ರಂಥಾಲಯ, ಸಭಾಂಗಣ, ವಕೀಲರ ಕೊಠಡಿಗಳು ಮತ್ತು ಕೂರುವ ಸ್ಥಳ, ಹಿರಿಯ ವಕೀಲರಿಗೆ ಗೊತ್ತುಪಡಿಸಿದ ಕೊಠಡಿಗಳು, ವಕೀಲರು-ದಾವೆ ಹೂಡುವವರ ನಡುವಿನ ಸಮಾಲೋಚನಾ ಕೊಠಡಿಗಳು, ಪ್ರಥಮ ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಸೇವೆಗಳು, ಆಡಿಯೊ-ವಿಡಿಯೋ ಸೌಲಭ್ಯ ಕೊಠಡಿಗಳು ಮತ್ತು ಇತರ ಹಲವು ಮೂಲಸೌಕರ್ಯ ಅಗತ್ಯತೆಗಳಂತಹ ಸಾಕಷ್ಟು ಅಗತ್ಯ ಸೌಲಭ್ಯಗಳ ಕೊರತೆ ಇದೆ.

5. ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ನಗರದೊಳಗೆ ಅಧಿಕೃತ ನಿವಾಸಗಳ ತೀವ್ರ ಕೊರತೆಯಿದೆ.

ಹೀಗೆ, ಇನ್ನುಮುಂತಾಗಿ ಕೆಲವು ಕಾರಣಗಳನ್ನು ಶರ್ಮಾ ಅವರು ಹೈಕೋರ್ಟ್‌ ವಕೀಲರ ಸಂಘಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದರು.

ಶರ್ಮಾ ತಮ್ಮ ಪತ್ರದಲ್ಲಿ ತಾವು ವೃತ್ತಿ ನಿರತ ವಕೀಲರಾಗಿದ್ದಾಗ, ಕಾನೂನು ಕೆಲಸಕ್ಕಾಗಿ ಅಥವಾ ಕಕ್ಷಿದಾರರೊಂದಿಗೆ ಸಮಾಲೋಚನೆಗಾಗಿ ಕುಳಿತುಕೊಳ್ಳಲು ಯಾವುದೇ ಸ್ಥಳ ಸಿಗುತ್ತಿರಲಿಲ್ಲ ಎನ್ನುವ ಅಂಶವನ್ನೂ ನೆನಪಿಸಿದ್ದಾರೆ.