ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕಳೆದ ತಿಂಗಳು ಮಾಧ್ಯಮಗೋಷ್ಠಿಯಲ್ಲಿ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 499, 500 (ಮಾನಹಾನಿ), 501 (ಮಾನಹಾನಿ ವಿಚಾರಗಳ ಮುದ್ರಣ) ಅಡಿ ಕಾಮರೂಫ್ (ಗ್ರಾಮೀಣ) ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರ ಮುಂದೆ ಪ್ರಕರಣ ದಾಖಲಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅಸ್ಸಾಂನಲ್ಲಿ ಪಿಪಿಇ ಕಿಟ್ ಖರೀದಿಸಲು ಟೆಂಡರ್ ಕರೆಯುವಾಗ ಸಾಕಷ್ಟು ಅವ್ಯವಹಾರವಾಗಿದೆ. ಆಗ ಆರೋಗ್ಯ ಸಚಿವರಾಗಿದ್ದ ಶರ್ಮಾ ಅವರು ತಮ್ಮ ಪತ್ನಿಗೆ ಸೇರಿದ ಕಂಪೆನಿಗೆ ಹೆಚ್ಚಿನ ಬೆಲೆಗೆ ಗುತ್ತಿಗೆ ನೀಡಿದ್ದರು ಎಂದು ಮಾಧ್ಯಮಗೋಷ್ಠಿಯಲ್ಲಿ ಜೂನ್ 4ರಂದು ಸಿಸೋಡಿಯಾ ಆರೋಪಿಸಿದ್ದರು.
ಸರಿಯಾದ ರೀತಿಯಲ್ಲಿ ಪ್ರಕ್ರಿಯೆ ನಡೆಸದೇ ಶರ್ಮಾ ಅವರಿಗೆ ಹತ್ತಿರವಾದ ಸಂಸ್ಥೆಗೆ ಟೆಂಡರ್ ನೀಡಲಾಗಿತ್ತು ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯಿದೆ ಅಡಿ ದೊರೆತಿದ್ದ ಮಾಹಿತಿ ಆಧರಿಸಿ ʼದಿ ವೈರ್ʼ ಆನ್‌ಲೈನ್ ಮಾಧ್ಯವು ತನಿಖಾ ವರದಿ ಪ್ರಕಟಿಸಿತ್ತು. ಶರ್ಮಾ ಮತ್ತು ಅವರ ಪತ್ನಿ ಇಬ್ಬರೂ ಯಾವುದೇ ಪ್ರಮಾದವಾಗಿಲ್ಲ ಎಂದು ಆರೋಪ ನಿರಾಕರಿಸಿದ್ದರು.