Assam Map with Assam Repealing Bill, 2024  
ಸುದ್ದಿಗಳು

ವಿವಾಹ, ವಿಚ್ಛೇದನಕ್ಕೆ ಸಂಬಂಧಿಸಿದ ರಾಜ್ಯದಲ್ಲಿರುವ ಮುಸ್ಲಿಂ ಕಾನೂನು ರದ್ದುಗೊಳಿಸುವ ವಿಧೇಯಕ ಮಂಡಿಸಿದ ಅಸ್ಸಾಂ ಸರ್ಕಾರ

ಈಗಿರುವ ಕಾಯಿದೆ ದುರುಪಯೋಗಕ್ಕೆ ಮತ್ತು ಅಪ್ರಾಪ್ತ ವಯಸ್ಕರು ಅಥವಾ ಸಂಬಂಧಿತ ಪಕ್ಷಕಾರರ ಸಮ್ಮತಿ ಇಲ್ಲದೆ ಬಲವಂತದ ವಿವಾಹಕ್ಕೆ ಅನುವು ಮಾಡಿಕೊಡುತ್ತದೆ ಎಂದು ಮಸೂದೆ ಹೇಳಿದೆ.

Bar & Bench

ರಾಜ್ಯದಲ್ಲಿ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನಿಯಂತ್ರಿಸುವ ಈಗಿನ ಕಾನೂನನ್ನು ರದ್ದುಗೊಳಿಸುವ ಸಲುವಾಗಿ ಅಸ್ಸಾಂನ ಬಿಜೆಪಿ ಸರ್ಕಾರ ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಹೊಸ ಮಸೂದೆಯೊಂದನ್ನು ಮಂಡಿಸಿದೆ.

ಬಾಲ್ಯ ವಿವಾಹದ ಆಚರಣೆಗೆ ಕಡಿವಾಣ ಹಾಕದ ಆಧಾರದ ಮೇಲೆ ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯಿದೆ- 1935ನ್ನು ರದ್ದುಗೊಳಿಸುವ ಗುರಿ ಹೊಸ ಮಸೂದೆಯದ್ದಾಗಿದೆ.

ಅಲ್ಲದೆ ಕಾಯಿದೆ ರದ್ದಾಗಲು ಇನ್ನೂ ಅನೇಕ ಕಾರಣಗಳಿವೆ ಎಂದು ಮಸೂದೆ ಕುರಿತಾದ ಹೇಳಿಕೆ ವಿವರಿಸಿದೆ.

ಮುಸ್ಲಿಮ್ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಗಳಿಗೆ ಸಂಬಂಧಿಸಿದ 1935ರ ಕಾಯಿದೆ ಅಸ್ಸಾಂನಲ್ಲಿ ಅಳವಡಿಸಿಕೊಂಡ ಸ್ವಾತಂತ್ರ್ಯಪೂರ್ವ ಕಾಯಿದೆಯಾಗಿದೆ.

ಹಳೆಯ ಕಾಯಿದೆಯು ಮದುವೆ ಮತ್ತು ವಿಚ್ಛೇದನದ ನೋಂದಣಿ ಕಡ್ಡಾಯವಲ್ಲ ಎಂದಿರುವುದರಿಂದ ಅನೌಪಚಾರಿಕ ನೋಂದಣಿ ಪ್ರಕ್ರಿಯೆ ಇದ್ದರೂ ಅದು ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ಪಾಲಿಸದಿರಲು ಅವಕಾಶ ಮಾಡಿಕೊಡುತ್ತಿತ್ತು.

21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯ ವಿವಾಹ ನೋಂದಣಿಯ ಅವಕಾಶ ಹಾಗೇ ಉಳಿದಿದ್ದು ಈ ಕಾಯಿದೆಯ ಜಾರಿ ವಿಚಾರದಲ್ಲಿ ಯಾವುದೇ ಮೇಲ್ವಿಚಾರಣೆ ಇಲ್ಲದ ಪರಿಣಾಮ ದೊಡ್ಡ ಪ್ರಮಾಣದ ದಾವೆಗಳು ಕ್ರಿಮಿನಲ್‌ ಮತ್ತು ಸಿವಿಲ್‌ ದಾವೆಗಳು ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ ಎಂದು ನೂತನ ಮಸೂದೆ ಹೇಳಿದೆ.

ಅಸ್ತಿತ್ವದಲ್ಲಿರುವ ಕಾಯಿದೆಯನ್ನು ಅಧಿಕೃತ ರಿಜಿಸ್ಟ್ರಾರ್‌ಗಳು ಮತ್ತು ನಾಗರಿಕರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದ್ದು ಅಪ್ರಾಪ್ತ ವಯಸ್ಕರು ಅಥವಾ ಸಂಬಂಧಿತ ಪಕ್ಷಕಾರರ ಸಮ್ಮತಿ ಇಲ್ಲದೆ ಬಲವಂತದ ವಿವಾಹಕ್ಕೆ ಅನುವು ಮಾಡಿಕೊಡುತ್ತದೆ ಎಂದು ಅದು ಹೇಳಿದೆ.