ಸುದ್ದಿಗಳು

ಅಸ್ಸಾಂ ಹಿಂಸಾಚಾರ: ಎನ್‌ಆರ್‌ಸಿಯಲ್ಲಿದ್ದರೆ ಮಾತ್ರ ಪುನರ್ವಸತಿ ಎಂದು ಗುವಾಹಟಿ ಹೈಕೋರ್ಟ್‌ಗೆ ತಿಳಿಸಿದ ರಾಜ್ಯ ಸರ್ಕಾರ

Bar & Bench

ಒಕ್ಕಲೆಬ್ಬಿಸುವ ಯಾವುದೇ ವ್ಯಕ್ತಿಯ ವಿರುದ್ಧ ಅನಿವಾರ್ಯವಲ್ಲದ ಹೊರತು ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಸ್ಸಾಂ ಸರ್ಕಾರ ಗುವಾಹಟಿ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.

ಇಂದು ಹೊರಡಿಸಿದ ಆದೇಶದಲ್ಲಿ ರಾಜ್ಯ ಸರ್ಕಾರದ ವಾದವನ್ನು ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಕಖೆಟೊ ಸೆಮಾ ಅವರಿದ್ದ ವಿಭಾಗೀಯ ಪೀಠ ದಾಖಲಿಸಿಕೊಂಡಿತು. ದರ್ರಾಂಗ್ ಜಿಲ್ಲೆಯಲ್ಲಿ ತೆರವು ಕಾರ್ಯಾಚರಣೆ ನಂತರ ಉಂಟಾದ ಹಿಂಸಾಚಾರಕ್ಕೆ ಸಂಬಂಧಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳನ್ನು ನ್ಯಾಯಾಲಯ ಆಲಿಸಿತು.

ಈಗಿರುವಂತೆ ಉಳಿದ ಆಪಾದಿತ ಅತಿಕ್ರಮಣದಾರರ ಮೇಲೆ, ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ರಿಟ್‌ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಲು ಸ್ವತಂತ್ರರು ಎಂದು ನ್ಯಾಯಾಲಯ ತಿಳಿಸಿತು.

ಬೇರೆ ಜಿಲ್ಲೆಗಳಿಂದ ವಲಸೆ ಬಂದವರು ನಿಜವಾಗಿಯೂ ಭೂ ರಹಿತರೇ? ಭೂ ಸವಕಳಿಯಿಂದಾಗಿ ಅವರು ಭೂಮಿ ಕಳೆದುಕೊಂಡಿದ್ದಾರೆಯೇ? ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ಅವರ ಹೆಸರುಗಳು ಅವರ ಪೌರತ್ವ ಸ್ಥಿತಿಯನ್ನು ಸಾಬೀತುಪಡಿಸುತ್ತಿವೆಯೇ? ಎಂಬ ಅಂಶಗಳನ್ನು ಖಾತ್ರಿಪಡಿಸಿಕೊಂಡ ನಂತರ ತೆರವುಗೊಳಿಸಲಾದ ವ್ಯಕ್ತಿಗಳನ್ನು ಪುನರ್ವಸತಿಗಾಗಿ ಗುರುತಿಸಲಾದ 1,000 ಬೀಘಾ ಭೂಮಿಗೆ ಸ್ಥಳಾಂತರಿಸಲಾಗುವುದು ಎಂದು ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ದೆಬೋಜಿತ್ ಸೈಕಾ ತಿಳಿಸಿದರು.

ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆದ ಹಿಂಸಾಚಾರಕ್ಕೆ ಪರಿಹಾರ ಕೈಗೊಳ್ಳುವಂತೆ ಪೀಠ ಸೂಚಿಸಿದ್ದ ಹಿನ್ನೆಲೆಯಲ್ಲಿ ಅಡ್ವೊಕೇಟ್‌ ಜನರಲ್‌ ಅವರು ಕೈಗೊಂಡ ಕ್ರಮಗಳನ್ನು ಅಫಿಡವಿಟ್‌ನಲ್ಲಿ ವಿವರಿಸಿರುವುದಾಗಿ ತಿಳಿಸಿದರು.

ಘಟನೆಯ ಹಿನ್ನೆಲೆ

ಸೆಪ್ಟೆಂಬರ್ 23 ರಂದು ನಡೆದ ಬಲವಂತದ ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮೇಲೆ ಅಸ್ಸಾಂ ಪೊಲೀಸರು ಗುಂಡು ಹಾರಿಸಿದರು. ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಅವರಲ್ಲಿ ಒಬ್ಬ ವ್ಯಕ್ತಿ ಸ್ಥಳೀಯ ಅಂಚೆ ಕಚೇರಿಯಿಂದ ಹಿಂತಿರುಗುತ್ತಿದ್ದ 12 ವರ್ಷದ ಬಾಲಕ ಮತ್ತೊಬ್ಬಾತ 33 ವರ್ಷದವ ಎಂದು ತಿಳಿದುಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ವಿವಿಧ ಪಿಐಎಲ್‌ಗಳನ್ನು ಸಲ್ಲಿಸಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 14 ರಂದು ನಡೆಯಲಿದೆ.