High Court of Karnataka 
ಸುದ್ದಿಗಳು

ಮಹಿಳಾ ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ: ಶಾಸಕ ಸುರೇಶ್‌ ಗೌಡ ಪುತ್ರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಅರ್ಜಿದಾರೆ ಮತ್ತು ಅವರ ತಂದೆ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ತೋರಿಸುವ ದಾಖಲೆಗಳನ್ನು ಅರ್ಜಿದಾರರ ಪರ ಹಿರಿಯ ವಕೀಲರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ ಎಂದಿರುವ ಪೀಠ.

Bar & Bench

ಶ್ರೀರಂಗಪಟ್ಟಣದ ಉಕ್ಕಡ ಮಾರಮ್ಮ ದೇವಾಲಯದಲ್ಲಿ ಭದ್ರತೆಯ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಕೆನ್ನೆಗೆ ಹೊಡೆದ ಪ್ರಕರಣದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್‌ ಗೌಡ ಅವರ ಪುತ್ರಿ ಐಶ್ವರ್ಯಾ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಐಶ್ವರ್ಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪುರಸ್ಕರಿಸಿದೆ.

Justice S Vishwajith Shetty

ಅರ್ಜಿದಾರರು ಸ್ಥಳೀಯ ಶಾಸಕರ ಪುತ್ರಿಯಾಗಿದ್ದು, ಅವರ ಪತಿ ಹಾಲಿ ಸೇವೆಯಲ್ಲಿರುವ ಡಿವೈಎಸ್‌ಪಿ ಆಗಿದ್ದಾರೆ. ಅರ್ಜಿದಾರರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಹೊಂದಿರುವ ವಿವಾಹಿತ ಮಹಿಳೆ ಎಂದು ಹೇಳಲಾಗಿದೆ. ಪ್ರಕರಣಕ್ಕೆ ಕಾರಣವಾದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತು ಅವರ ತಂದೆ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ತೋರಿಸುವ ದಾಖಲೆಗಳನ್ನು ಅರ್ಜಿದಾರರ ಪರ ಹಿರಿಯ ವಕೀಲರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿತ ಅಪರಾಧಗಳಿಗೆ ಗರಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಬೇರೆ ಯಾವುದೇ ಅಪರಾಧಿಕ ಹಿನ್ನೆಲೆ ಇರದ ಅರ್ಜಿದಾರರು ಪ್ರಕರಣದ ತನಿಖೆಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂಬ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗಿದ್ದು, ಅರ್ಜಿದಾರರಿಗೆ ಅನ್ವಯವಾಗುವ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಇದಕ್ಕೂ ಮುನ್ನ ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆಯೇ ಐಶ್ವರ್ಯಾ ಪರ ಹಿರಿಯ ವಕೀಲ ಸಂದೇಶ್ ಚೌಟ ಹಾಜರಾಗಿ, ಅರ್ಜಿದಾರರು ಘಟನೆ ಸಂಬಂಧ ಕ್ಷಮೆಯಾಚಿಸಿದ್ದು, ಇದು ಎಲ್ಲ ಸುದ್ದಿ ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಅರ್ಜಿದಾರರ ಕ್ಷಮೆಯಾಚನೆಯ ಸ್ವರೂಪವನ್ನು ಸಹ ನ್ಯಾಯಾಲಯ ಗಮನಿಸಬಹುದು ಎಂದರು.

ಭೀಮನ ಅಮಾವಾಸ್ಯೆಯಂದು (ಆಗಸ್ಟ್ 12) ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಶ್ರೀ ಅಹಲ್ಯಾದೇವಿ ಮಾರಮ್ಮ ದೇವಸ್ಥಾನಕ್ಕೆ ಐಶ್ವರ್ಯಾ ತಮ್ಮ ಮಕ್ಕಳೊಂದಿಗೆ ತೆರಳಿದ್ದರು. ದೇವಾಲಯದ ಗರ್ಭಗುಡಿಗೆ ಪ್ರವೇಶಿಸುವ ವಿಚಾರವಾಗಿ ಅಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಪಾಟೀಲ್‌ ಅವರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಐಶ್ವರ್ಯಾ ಪಿಎಸ್‌ಐ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಕೆನ್ನೆಗೆ ಹೊಡೆದಿದ್ದರು. ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿತ್ತು.

ಇದರಿಂದ, ಐಶ್ವರ್ಯಾ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 132 (ಸರ್ಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 115(2) (ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು), 352 (ಉದ್ದೇಶಪೂರ್ವಕ ಅಪಮಾನ) ಹಾಗೂ 351(2)(ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಬಂಧನ ಭೀತಿ ಎದುರಿಸುತ್ತಿದ್ದ ಐಶ್ವರ್ಯಾ ಮೊದಲು ಶ್ರೀರಂಗಪಟ್ಟಣದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲಿನ ಹಲ್ಲೆ ಆರೋಪದ ಗಂಭೀರತೆಯನ್ನು ಪರಿಗಣಿಸಿದ್ದ ಸೆಷನ್ಸ್‌ ನ್ಯಾಯಾಲಯ ಆಗಸ್ಟ್ 31ರಂದು ಐಶ್ವರ್ಯಾ ಅರ್ಜಿ ವಜಾಗೊಳಿಸಿತ್ತು. ಇದರಿಂದ, ಐಶ್ವರ್ಯಾ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಐಶ್ವರ್ಯಾ ಪರ ವಕೀಲರು, ಮಹಿಳಾ ಪಿಎಸ್‌ಐ ಮೇಲೆ ಅರ್ಜಿದಾರರು ಮಾಡಿದ ಹಲ್ಲೆಯು ಉದ್ದೇಶಪೂರ್ವಕವಾಗಿರಲಿಲ್ಲ, ಬದಲಿಗೆ ಆ ಕ್ಷಣದ ಆವೇಶದಲ್ಲಿ ನಡೆದಿರುವ ಘಟನೆಯಾಗಿದೆ. ಆ ತಪ್ಪಿಗಾಗಿ ಅರ್ಜಿದಾರರು ಮತ್ತು ಅರ್ಜಿದಾರರ ತಂದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಅರ್ಜಿದಾರರ ವಿರುದ್ಧದ ಆರೋಪಿತ ಅಪರಾಧಗಳಿಗೆ ಗರಿಷ್ಠ 2 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅರ್ಜಿದಾರರು ವಿವಾಹಿತ ಮಹಿಳೆಯಾಗಿದ್ದು, ಅವರ ವಿರುದ್ಧ ಬೇರೆ ಯಾವುದೇ ಅಪರಾಧ ಹಿನ್ನೆಲೆಗಳಿಲ್ಲ. ಅವರು ತನಿಖೆಗೆ ಸಹಕರಿಸಲು ಸಿದ್ಧರಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂದು ಕೋರಿದ್ದರು.

ಅರ್ಜಿಯನ್ನು ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕೆಂದು ಕೋರಿದ್ದರು.