ಸಶಸ್ತ್ರ ಪಡೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದಗಳನ್ನು ವಿಚಾರಣೆ ಮಾಡಲು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಗೆ (ಸಿಎಟಿ) ಅಧಿಕಾರ ಇದೆ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ [ಭಾರತ ಒಕ್ಕೂಟ ಮತ್ತು ಕಪಿಲ್ ಗುರ್ಜರ್ ನಡುವಣ ಪ್ರಕರಣ].
ಸೇವಾ ವಿಷಯಗಳಿಗೆ ಸಂಬಂಧಿಸಿದ ಯಾವುದೇ ವಿವಾದಗಳು ಅಥವಾ ಈಗಾಗಲೇ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಂಡಿರುವ ವ್ಯಕ್ತಿಯ ಅರ್ಜಿಗಳು ಸಿಎಟಿಯ ಅಧಿಕಾರ ವ್ಯಾಪ್ತಿಯಿಂದ ಹೊರಗಿರುತ್ತವೆ ಎಂದು ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಮಧು ಜೈನ್ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
“ಸಶಸ್ತ್ರ ಪಡೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದ, ಈಗಾಗಲೇ ಸಶಸ್ತ್ರ ಪಡೆಗಳ ಸದಸ್ಯರಾಗಿರುವ ವ್ಯಕ್ತಿ ಎತ್ತದೆ ಹೋಗಿದ್ದರೆ ವಿಚಾರಣೆ ಮಾಡಲು ನ್ಯಾಯಮಂಡಳಿಗೆ ಅಧಿಕಾರವಿದೆ ಎಂದು ನ್ಯಾಯಮಂಡಳಿ ನಿರ್ಣಯಿಸಿರುವುದು ಸೂಕ್ತವಾಗಿ ಇದೆ ಎಂದು ತೀರ್ಮಾನಿಸಿದ್ದೇವೆ. ಅದಕ್ಕೆ ಅನುಗುಣವಾಗಿ ನ್ಯಾಯಮಂಡಳಿಯ ಅಧಿಕಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ನೀಡಿದ್ದೇವೆ ಎಂದು ಪೀಠ ಹೇಳಿದೆ.
ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸುವ ಅರ್ಜಿಯನ್ನು ವಿಚಾರಣೆ ಮಾಡಲು ಸಿಎಟಿಗೆ ಅಧಿಕಾರವಿದೆ ಎಂದು ಹೇಳಿದ್ದ ಸಿಎಟಿ ಪೂರ್ಣ ಪೀಠದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಪೀಠ ಈ ವಿಚಾರಗಳನ್ನು ತಿಳಿಸಿತು.
ವ್ಯಾಜ್ಯ 2018ರ ಆರ್‌ಪಿಎಫ್ ನೇಮಕಾತಿಗೆ ಸಂಬಂಧಿಸಿದ್ದಾಗಿದೆ. ಕಪಿಲ್ ಗುರ್ಜಾರ್ ಎಲ್ಲಾ ಪರೀಕ್ಷೆಗಳನ್ನು ಉತ್ತೀರ್ಣರಾದರೂ, ಹಿಂದೆ ನಡೆದಿದ್ದ ಲಾಸಿಕ್ (LASIK) ಶಸ್ತ್ರಚಿಕಿತ್ಸೆಯ ಕಾರಣದಿಂದ ಅವರನ್ನು ವೈದ್ಯಕೀಯವಾಗಿ ಅನರ್ಹರು ಎಂದು ಘೋಷಿಸಲಾಗಿತ್ತು. 2022ರಲ್ಲಿ ಸಿಎಟಿ ಅವರ ನೇಮಕಾತಿಗೆ ಆದೇಶ ನೀಡಿತ್ತು. ಆದರೆ ಸಿಎಟಿಗೆ ವಿಚಾರಣೆ ನಡೆಸುವ ಅಧಿಕಾರವಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ತೀರ್ಪನ್ನು ಪ್ರಶ್ನಿಸಿತು.
ಇದೀಗ ಕೇಂದ್ರದ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಈಗಾಗಲೇ ಸಶಸ್ತ್ರ ಪಡೆಗಳ ಸದಸ್ಯರಾಗಿರುವವರ ಸೇವಾ ವಿಷಯಗಳು ಮತ್ತು ನೇಮಕಾತಿ ಹಂತದಲ್ಲಿರುವ ಅಭ್ಯರ್ಥಿಗಳು ಎತ್ತುವ ವಿವಾದಗಳ ನಡುವೆ ವ್ಯತ್ಯಾಸ ಇದೆ ಎಂದು ಸ್ಪಷ್ಟಪಡಿಸಿತು.
ಇದಲ್ಲದೆ, ಆರ್‌ಪಿಎಫ್ ಅನ್ನು ಗ್ರೂಪ್ ‘ಎʼ ಕೇಂದ್ರ ನಾಗರಿಕ ಸೇವೆಯಾಗಿ ಸಹ ಗುರುತಿಸಲಾಗಿದೆ. ಆದ್ದರಿಂದ 1985ರ ಆಡಳಿತಾತ್ಮಕ ನ್ಯಾಯಮಂಡಳಿ ಕಾಯಿದೆಯ ಸೆಕ್ಷನ್ 14ರ ಅಡಿಯಲ್ಲಿ ನೇಮಕಾತಿ ಸಂಬಂಧಿತ ವಿಷಯಗಳು ಸಿಎಟಿ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಅವಲೋಕನಗಳು ಕೇವಲ ಸಿಎಟಿಯ ಅಧಿಕಾರಕ್ಕೆ ಸಂಬಂಧಿಸಿದವು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಗುರ್ಜಾರ್ ಅವರ ನೇಮಕಾತಿಗೆ ಸಂಬಂಧಿಸಿದ ಸರ್ಕಾರದ ಪ್ರಶ್ನೆಯನ್ನು ರೋಸ್ಟರ್ ಪೀಠದೆದುರು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿದೆ.