Atiq Ahmed and Supreme Court
Atiq Ahmed and Supreme Court 
ಸುದ್ದಿಗಳು

ಅತೀಕ್ ಅಹಮದ್ ಹತ್ಯೆ: ನ್ಯಾಯಾಂಗ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ

Bar & Bench

ಪೊಲೀಸ್‌ ವಶದಲ್ಲಿದ್ದಾಗಲೇ ಪಾತಕಿ- ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಹತ್ಯೆ ಮಾಡಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿ ಸಲ್ಲಿಸಿರುವ ವಕೀಲ ವಿಶಾಲ್ ತಿವಾರಿ ಅವರು 2017ರಿಂದ ಉತ್ತರ ಪ್ರದೇಶದಲ್ಲಿ ನಡೆಸಲಾದ 183 'ಎನ್‌ಕೌಂಟರ್'ಗಳನ್ನು ಸಮಿತಿ  ತನಿಖೆ ಮಾಡಬೇಕು ಎಂದು ಪ್ರಾರ್ಥಿಸಿದ್ದಾರೆ.

ಅಲ್ಲದೆ, ಪಾತಕಿ ವಿಕಾಸ್ ದುಬೆಯ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸಹ ಅರ್ಜಿದಾರರು ಕೋರಿದ್ದಾರೆ

“ಇಂತಹ ಕೃತ್ಯಗಳು ಪ್ರಜಾಪ್ರಭುತ್ವಕ್ಕೆ ಹಾಗೂ ಕಾನೂನಾತ್ಮಕ ಆಡಳಿತಕ್ಕೆ ತೀವ್ರ ಬೆದರಿಕೆಯಾಗಿದ್ದು ಅರಾಜಕತೆಗೆ ಕಾರಣವಾಗುವುದಲ್ಲದೆ, 'ಪೊಲೀಸ್‌ ರಾಜ್ಯ' ತಲೆಎತ್ತುವಂತಹ ಲಕ್ಷಣಗಳಾಗಿ ಮೇಲ್ನೋಟಕ್ಕೆಕಂಡುಬರುತ್ತವೆ. ಕಾನೂನೇತರ ಹತ್ಯೆಗಳು ಅಥವಾ ಪೊಲೀಸರ ನಕಲಿ ಎನ್‌ಕೌಂಟರ್‌ಗಳನ್ನು ಕಾನೂನಿನಡಿ ಹೇಯ ರೀತಿಯಲ್ಲಿ ಖಂಡಿಸಲಾಗಿದೆ. ಪ್ರಜಾಪ್ರಭುತ್ವ ಸಮಾಜದಲ್ಲಿ ಪೊಲೀಸರು ಅಂತಿಮ ನ್ಯಾಯ ನೀಡುವ ವ್ಯವಸ್ಥೆ ಅಥವಾ ಶಿಕ್ಷೆ ನೀಡುವ ಪ್ರಾಧಿಕಾರವಾಗಲು ಅವಕಾಶ ಇಲ್ಲ. ಶಿಕ್ಷೆ ನೀಡುವ ಅಧಿಕಾರ ನ್ಯಾಯಾಂಗಕ್ಕೆ ಮಾತ್ರ ಇದೆ. ಪೊಲೀಸರು ʼಡೇರ್‌ ಡೆವಿಲ್‌ʼಗಳಾದರೆ ನ್ಯಾಯಿಕ ಆಡಳಿತ ವ್ಯವಸ್ಥೆಯೇ ಕುಸಿದು ಬೀಳಲಿದ್ದು ಜನ ಸಾಮಾನ್ಯರಲ್ಲಿ ಭೀತಿ ಹುಟ್ಟಿಸುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ತುಂಬಾ ಅಪಾಯಕಾರಿಯಾಗಿದ್ದು ಮತ್ತಷ್ಟು ಅಪರಾಧಗಳು ಹೆಚ್ಚಲು ಕಾರಣವಾಗುತ್ತದೆ” ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಜೀವಿಸುವ ಹಕ್ಕು, ಸ್ವಾತಂತ್ರ್ಯದ ಮೇಲೆ ಹಾಗೂ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೇಲೆ ಪರಿಣಾಮ ಬೀರುವುದರಿಂದ ಪರಿಹಾರಕ್ಕಾಗಿ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅರ್ಜಿ ಒತ್ತಿ ಹೇಳಿದೆ.

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿಯ ಹತ್ಯೆ ಅತ್ಯಂತ ಗಂಭೀರ ಕೃತ್ಯವಾಗಿದ್ದು ಪೊಲೀಸ್ ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುತ್ತದೆ. ಘಟನೆಗೆ ಸಂಬಂಧಿಸಿದಂತೆ ಎರಡು ಅಂಶಗಳಿರಬಹುದು ಒಂದು – ಅತೀಕ್‌ ಮತ್ತು ಅಶ್ರಫ್‌ ಅವರ ಹತ್ಯೆ ಬೇರೆ ಗ್ಯಾಂಗ್‌ಸ್ಟರ್‌ಗಳ ಅಪರಾಧವಾಗಿರಬಹುದು, ಇಲ್ಲವೇ ವ್ಯವಸ್ಥೆ ಶಾಮೀಲಾಗಿರುವ ಪಿತೂರಿ ಆಗಿರಬಹುದು. ಅತೀಕ್‌ ಅಥವಾ ಅಶ್ರಫ್‌ ಅಥವಾ ಇನ್ನಾರದೇ ಹತ್ಯೆಯ ಬಗ್ಗೆ ಈ ಮೊಕದ್ದಮೆಯನ್ನು ಹೂಡಲಾಗಿಲ್ಲ, ಬದಲಿಗೆ ಪೊಲೀಸ್‌ ಕಸ್ಟಡಿಯಲ್ಲಿ, ಅದರಲ್ಲಿಯೂ ಪರಿಸ್ಥಿತಿ ತುಂಬಾ ಸೂಕ್ಷವಿರುವಾಗ ನಡೆದಿರುವ ಹತ್ಯೆಯ ಬಗ್ಗೆ ಈ ಮೊಕದ್ದಮೆ ಕಾಳಜಿ ಹೊಂದಿದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪಾತಕಿ- ರಾಜಕಾರಣಿ ಅತೀಕ್‌ ಅಹ್ಮದ್‌ 2004- 2009ರ ಅವಧಿಯಲ್ಲಿ ಸಂಸತ್‌ ಸದಸ್ಯರಾಗಿದ್ದರು. ಅದಕ್ಕೂ ಮೊದಲು 15 ವರ್ಷ ಶಾಸಕರಾಗಿದ್ದರು.