[L to R] Atiq Ahmed's brother Ashraf and Atiq Ahmed
[L to R] Atiq Ahmed's brother Ashraf and Atiq Ahmed  Business Today
ಸುದ್ದಿಗಳು

ಅತೀಕ್ ಅಹಮದ್‌ ಹತ್ಯೆ: ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳಿಂದ ವರದಿ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

Bar & Bench

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಪೊಲೀಸರ ವಶದಲ್ಲಿದ್ದ ವೇಳೆ ದುಷ್ಕರ್ಮಿಗಳಿಂದ ಗುಂಡೇಟಿಗೆ ಬಲಿಯಾದ ಮಾಜಿ ಪಾತಕಿ ಹಾಗೂ ರಾಜಕಾರಣಿ ಅತೀಕ್‌ ಅಹಮದ್‌ ಹಾಗೂ ಆತನ ಸಹೋದರ ಅಶ್ರಫ್‌ ಅಹಮದ್‌ ಹತ್ಯೆಗೆ ಸಂಬಂಧಿಸಿದ ದೂರುಗಳನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮಂಗಳವಾರ ತನಿಖೆಗೆ ಪರಿಗಣಿಸಿದೆ.

ಉತ್ತರ ಪ್ರದೇಶದ ಪೊಲೀಸ್‌ ಮಹಾನಿರ್ದೇಶಕ ಮತ್ತು ಪ್ರಯಾಗ್‌ರಾಜ್‌ ಪೊಲೀಸ್‌ ಆಯುಕ್ತರನ್ನು ನಾಲ್ಕು ವಾರದೊಳಗೆ ವರದಿ ಸಲ್ಲಿಸುವಂತೆ ಆಯೋಗ ಸೂಚಿಸಿದೆ. ಈ ಕೆಳಗಿನ ದಾಖಲೆಗಳನ್ನು ನೀಡುವಂತೆ ಅದು ಇದೇ ವೇಳೆ ಸೂಚಿಸಿದೆ:

- ಸಾವಿಗೆ ಕಾರಣವಾದ ಎಲ್ಲಾ ಅಂಶಗಳನ್ನು (ಸಮಯ, ಸ್ಥಳ ಮತ್ತು ಬಂಧನ/ಬಂಧನದ ಕಾರಣ ಸೇರಿದಂತೆ) ಒಳಗೊಂಡಿರುವ ವಿವರವಾದ ವರದಿ.

- ಮೃತರ ವಿರುದ್ಧ ದಾಖಲಾಗಿರುವ ದೂರಿನ ಪ್ರತಿ ಮತ್ತು ಎಫ್‌ಐಆರ್‌ ; (iii) ಬಂಧನ ಜ್ಞಾಪನಾ ಪತ್ರ ಮತ್ತು ತಪಾಸಣೆ ಮೆಮೋದ ಪ್ರತಿ.

 - ಬಂಧನದ ಮಾಹಿತಿಯನ್ನು ಕುಟುಂಬ/ಸಂಬಂಧಿಗಳಿಗೆ ನೀಡಲಾಗಿದೆಯೇ ಎಂಬುದರ ವಿವರ.

- ವಶಕ್ಕೆ ಪಡೆದ ಜ್ಞಾಪನಾ ಪತ್ರ ಮತ್ತು ರಿಕವರಿ ಮೆಮೊ.

- ಮೃತರ ವೈದ್ಯಕೀಯ ಕಾನೂನು ಪ್ರಮಾಣಪತ್ರದ ಪ್ರತಿ.

- ಎಲ್ಲಾ ಸಂಬಂಧಿತ ಸಾಮಾನ್ಯ ದಿನಚರಿಗಳ ಸಾರಾಂಶ (ಎಲ್ಲವೂ ಸ್ಫುಟವಾಗಿರಬೇಕು ಮತ್ತು ಇಂಗ್ಲಿಷ್‌ ಇಲ್ಲವೇ ಹಿಂದಿ ಭಾಷೆಗೆ ಲಿಪ್ಯಂತರವಾಗಿರಬೇಕು).

- ತನಿಖಾ ವರದಿ

- ಮರಣೋತ್ತರ ಪರೀಕ್ಷೆಯ ವರದಿ (ವರದಿಯ ಟೈಪ್‌ ಮಾಡಿದ ಪ್ರತಿಯಲ್ಲಿ ವಿಶೇಷವಾಗಿ ಗಾಯಗಳ ವಿವರಣೆ ಒದಗಿಸತಕ್ಕದ್ದು)

 - ಮರಣೋತ್ತರ ಪರೀಕ್ಷೆಯ ವಿಡಿಯೋ ಕ್ಯಾಸೆಟ್/ ಸಿಡಿ;

- ವಿವರಗಳುಳ್ಳ ಘಟನಾ ದೃಶ್ಯದ ಸ್ಥಳ ನಕಾಶೆ;

- ಒಳಾಂಗಗಳ ರಾಸಾಯನಿಕ ಮತ್ತು ಹಿಸ್ಟೋಪಾಥಾಲಜಿ ಪರೀಕ್ಷೆ (ಅನ್ವಯವಾಗುವುದಾದರೆ);

- ಎಫ್‌ಎಸ್‌ಎಲ್‌ ವರದಿಯ ಆಧಾರದ ಮೇಲೆ ಸಾವಿಗೆ ಅಂತಿಮ ಕಾರಣ. 

- 2005ರಕಾಯಿದೆ 25ರ ಪ್ರಕಾರ ಮಾಡಲಾದ ತಿದ್ದುಪಡಿಯಂತೆ ಸಿಆರ್‌ಪಿಸಿ ಸೆಕ್ಷನ್‌ (1761-ಎ) ಅಡಿ ಮ್ಯಾಜಿಸ್ಟೇರಿಯಲ್ ತನಿಖಾ ವರದಿ.

ಟಿವಿ ವರದಿಗಾರರ ಸೋಗಿನಲ್ಲಿದ್ದ ಮೂವರು ದುಷ್ಕರ್ಮಿಗಳು ಏಪ್ರಿಲ್ 15 ರ ರಾತ್ರಿ ಪಾಯಿಂಟ್‌ ಬ್ಲಾಂಕ್‌ ಅಂತರದಲ್ಲಿ ಅತೀಕ್ ಅಹಮದ್‌ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಕಡ್ಡಾಯ ವೈದ್ಯಕೀಯ ಪರೀಕ್ಷೆಗಾಗಿ ಪ್ರಯಾಗ್‌ರಾಜ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಘಟನೆ ನಡೆದಿತ್ತು. ಶರಣಾದ ದಾಳಿಕೋರರನ್ನು ಏಪ್ರಿಲ್ 16ರಂದು ಅಲಾಹಾಬಾದ್‌ ಜಿಲ್ಲಾ ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಅತೀಕ್‌ ಪುತ್ರ ಅಸಾದ್‌ ಮತ್ತು ಆತನ ಸಹಚರ ಗುಲಾಮ್‌ನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಝಾನ್ಸಿಯಲ್ಲಿ ಹತ್ಯೆ ಮಾಡಿದ ಎರಡು ದಿನಗಳ ಬಳಿಕ ಅತೀಕ್‌ ಮತ್ತು ಆತನ ಸಹೋದರನ ಹತ್ಯೆಯಾಗಿತ್ತು.

ಕುತೂಹಲದ ಸಂಗತಿ ಎಂದರೆ  ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಆರೋಪಿತರಾಗಿರುವ ತನಗೆ ಮತ್ತು ತನ್ನ ಕುಟುಂಬದವರಿಗೆ ರಕ್ಷಣೆ ಒದಗಿಸುವಂತೆ ತಾನು ಸಾಯುವ ಹದಿನೆಂಟು ದಿನಗಳಿಗೂ ಮುಂಚೆ ಅತೀಕ್‌ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಪಾಲ್‌ ಪ್ರಕರಣದ ತನಿಖೆಗಾಗಿ ತನ್ನನ್ನು ಸಾಬರಮತಿ ಜೈಲಿನಿಂದ ಅಲಾಹಾಬಾದ್‌ ಜೈಲಿಗೆ ವರ್ಗಾಯಿಸುತ್ತಿರುವುದನ್ನು ಆತ ಪ್ರಶ್ನಿಸಿದ್ದರು.

ತನ್ನನ್ನು ಉತ್ತರ ಪ್ರದೇಶ ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲುತ್ತಾರೆ ಎಂದು ಅತೀಕ್ ಸುಪ್ರೀಂ ಕೋರ್ಟ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಆದರೆ, ಅತೀಕ್‌ ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಆತ ಪೊಲೀಸರ ಬಳಿ ಸುರಕ್ಷಿತವಾಗಿರುತ್ತಾನೆ ಎಂದಿತ್ತು.

ಹತ್ಯೆ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಇದೀಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯ ಏಪ್ರಿಲ್ 24ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

ಕೃತ್ಯದ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ತನಿಖಾ ಆಯೋಗ ಕಾಯಿದೆ- 1952ರ ಅಡಿಯಲ್ಲಿ ಈಗಾಗಲೇ ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರವಿಂದ್ ಕುಮಾರ್ ತ್ರಿಪಾಠಿ ಅವರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸಿದೆ.