ಸುದ್ದಿಗಳು

ವಕೀಲರೊಬ್ಬರಿಗೆ ಥಳಿತ: ಚಿಕ್ಕಮಗಳೂರಿನಲ್ಲಿ ಪೊಲೀಸರ ವಿರುದ್ಧ ಭಾರೀ ಪ್ರತಿಭಟನೆ; ಖಾಕಿ ಪಡೆಯ ಆರು ಮಂದಿ ಅಮಾನತು

Bar & Bench

ಹೆಲ್ಮೆಟ್‌ ಧರಿಸದ ವಕೀಲರೊಬ್ಬರನ್ನು ಪೊಲೀಸರು ಮನಸೋಇಚ್ಛೆ ಥಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ವಕೀಲ ಸಮುದಾಯ ಶುಕ್ರವಾರ ಭಾರೀ ಪ್ರತಿಭಟನೆ ನಡೆಸಿದ್ದು ಇದೇ ವೇಳೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಪೂಜಾರಿ ಸೇರಿದಂತೆ ಆರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ವಿಚಾರಣೆ ನಡೆಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ಅಮಾನತು ಆದೇಶ ಹೊರಡಿಸಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು “ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪಿಎಸ್‌ಐ, ಎಎಸ್‌ಐ, ಹೆಡ್‌ ಕಾನ್‌ಸ್ಟೇಬಲ್‌ ಹಾಗೂ ಮೂವರು ಪೇದೆಗಳನ್ನು ಅಮಾನತುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 307 324, 506, 504ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದ್ದು ಗಾಯಗೊಂಡ ಪ್ರೀತಮ್‌ ಅವರನ್ನು  ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಹೆಲ್ಮೆಟ್‌ ಧರಿಸದ ಆರೋಪದಡಿ ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ವಕೀಲ ಪ್ರೀತಮ್‌ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲರ ಸಂಘದ ಕಚೇರಿಯಲ್ಲಿ ಬೆಳಿಗ್ಗೆ ತುರ್ತು ಸಭೆ ನಡೆಸಿದ ಸಾವಿರಾರು ವಕೀಲರು, ನ್ಯಾಯಾಲಯ ಕಲಾಪಗಳಿಂದ ದೂರ ಉಳಿಯಲು ತೀರ್ಮಾನಿಸಿದರು.

ವಕೀಲ ಪ್ರೀತಮ್ ದಂಡ ಕಟ್ಟುತ್ತೇನೆ ಎಂದು ಹೇಳಿದರೂ  ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ವಕೀಲ ಸಮುದಾಯ ದೂರಿದೆ. ಗುರುವಾರ ತಡರಾತ್ರಿ 2 ಗಂಟೆಯಿಂದಲೇ ಪೊಲೀಸ್‌ ಠಾಣೆ ಎದುರು ವಕೀಲರು ಧರಣಿ ನಡೆಸಿದ್ದು ಎಸ್‌ಪಿ ಅಮ್ಟೆ ಅವರ ವಿರುದ್ಧವೂ ಧಿಕ್ಕಾರ ಕೂಗಿದರು ಎನ್ನಲಾಗಿದೆ.

ಇಂದು ಬೆಳಿಗ್ಗೆ ನಗರದ ಆಜಾದ್‌ ಪಾರ್ಕ್‌ ವೃತ್ತ, ಮಹಾತ್ಮ ಗಾಂಧಿ ರಸ್ತೆ ಹಾಗೂ ಐಜಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಅಪಾರ ಸಂಖ್ಯೆಯ ವಕೀಲರು ನಗರ ಠಾಣೆ ಎದುರು ಕೂಡ  ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಜಿಲ್ಲೆಗಳ ವಕೀಲರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡರು.