Sangeetha kicked by Mahantesh Cholachagudda Vartha Bharati
ಸುದ್ದಿಗಳು

ವಕೀಲೆ ಕುಟುಂಬದ ಮೇಲೆ ಹಲ್ಲೆ: ಕೆಎಸ್‌ಎಚ್‌ಆರ್‌ಸಿ ಎಡಿಜಿಪಿಗೆ ಆಯೋಗದಿಂದ ನೋಟಿಸ್‌, ವರದಿ ಸಲ್ಲಿಸಲು ಜೂನ್‌ 7ರ ಗಡುವು

ಉಪ ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯಿಂದ ತನಿಖೆ ನಡೆಸಲು ಕೆಎಸ್‌ಎಚ್‌ಆರ್‌ಸಿ ಎಡಿಜಿಪಿಗೆ ಆದೇಶಿಸಿರುವ ಆಯೋಗವು ಪೂರ್ಣ ಪೀಠದ ಮುಂದೆ ಪ್ರಕರಣವನ್ನು ವಿಚಾರಣೆಗೆ ನಿಗದಿ ಮಾಡುವಂತೆ ನಿರ್ದೇಶಿಸಿದೆ.

Siddesh M S

ಬಾಗಲಕೋಟೆಯಲ್ಲಿ ವಕೀಲೆ ಸಂಗೀತಾ ಶಿಕ್ಕೇರಿ ಮತ್ತು ಅವರ ಕುಟುಂಬದವರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರಿನ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ (ಕೆಎಸ್‌ಎಚ್‌ಆರ್‌ಸಿ) ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ, ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಗಲಕೋಟೆ ನಗರಸಭೆ ಆಯುಕ್ತರಿಗೆ ಕೆಎಸ್‌ಎಚ್‌ಆರ್‌ಸಿ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಹಲ್ಲೆಗೊಳಲಾಗಿರುವ ಕುಟುಂಬದ ಸದಸ್ಯೆಯಾಗಿರುವ ಬೆಂಗಳೂರಿನ ನಾಗರಭಾವಿಯ ಶಿವುಗೀತಾ ಮತ್ತು ವಕೀಲೆ ಸುಧಾ ಕಟ್ವಾ ಸಲ್ಲಿಸಿರುವ ದೂರಿನ ವಿಚಾರಣೆ ನಡೆಸಿದ ಕೆಎಸ್‌ಎಚ್‌ಆರ್‌ಸಿ ಮುಖ್ಯಸ್ಥ ಹಾಗೂ ನಿವೃತ್ತ ನ್ಯಾಯಮೂರ್ತಿ ಡಿ ಎಚ್‌ ವಘೇಲಾ ಅವರು ಜೂನ್‌ 7ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಉಪ ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯಿಂದ ತನಿಖೆ ನಡೆಸಲು ಕೆಎಸ್‌ಎಚ್‌ಆರ್‌ಸಿ ಎಡಿಜಿಪಿಗೆ ಆದೇಶಿಸಿದ್ದಾರೆ. ಅಲ್ಲದೇ, ಅಂದು ಪ್ರಕರಣವನ್ನು ಪೂರ್ಣ ಪೀಠದ ಮುಂದೆ ವಿಚಾರಣೆಗೆ ನಿಗದಿ ಮಾಡುವಂತೆ ನಿರ್ದೇಶಿಸಲಾಗಿದೆ.

ದೂರಿನ ವಿವರ: ಆಸ್ತಿಗೆ ಸಂಬಂಧಿಸಿದ ವಿವಾದವು ಸುಪ್ರೀಂ ಕೋರ್ಟ್‌ ಮತ್ತು ಬಾಗಲಕೋಟೆಯ ಹಿರಿಯ ಸಿವಿಲ್‌ ನ್ಯಾಯಾಯಾಧೀಶರ ನ್ಯಾಯಾಲಯದಲ್ಲಿ ಬಾಕಿ ಇದೆ. ಮಧ್ಯಂತರ ತಡೆಯಾಜ್ಞೆಯನ್ನು ಉಲ್ಲಂಘಿಸಿ, ಹನುಮಂತಪ್ಪ ಶಿಕ್ಕೇರಿ ಅಲಿಯಾಸ್‌ ಯಲಿಗಾರ್‌ ಪ್ರೇರೇಪಣೆಗೆ ಒಳಗಾಗಿ ರಾಜಶೇಖರ್‌ ನಾಯ್ಕರ್‌ ಮತ್ತವರ ಬೆಂಬಲಿಗರು ಬಾಗಲಕೋಟೆಯ ವಿನಾಯಕ ನಗರದಲ್ಲಿರುವ ಸಂಗೀತಾ ಶಿಕ್ಕೇರಿ ಅವರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೇ ಹೊರಗಡೆಯಿಂದ ಅಕ್ರಮವಾಗಿ ಮನೆ ಬಾಗಿಲಿಗೆ ಬೀಗ ಜಡಿದಿದ್ದಾರೆ. ಅಲ್ಲದೇ, ಸಂಗೀತಾ, ಆಕೆಯ ಪತಿಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ಮನೆಯ ಕಾಂಪೌಂಡ್, ಶೌಚಾಲಯ, ಕಾರ್‌ ಶೆಡ್ ಅನ್ನು ಜೆಸಿಬಿ ಬಳಸಿ ನಾಶ ಮಾಡಿದ್ದು, ಒತ್ತಾಯದಿಂದ ಆಕ್ಷೇಪಿತ ಆಸ್ತಿಯನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡಿದ್ದಾರೆ. ಇದರಿಂದ 10 ಲಕ್ಷ ರೂಪಾಯಿ ನಷ್ಟವಾಗಿದೆ. ದೂರುದಾರರ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ್ದು, ದೂರುದಾರರ ತಾಯಿಯನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹೆಸ್ಕಾಂ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಅರವಿಂದ್‌ ನಾಯಕ್‌ ಮತ್ತು ನಗರಸಭೆ ನೀರು ಸರಬರಾಜು ಎಂಜಿನಿಯರ್‌ ಮತ್ತು ಸಿಬ್ಬಂದಿ ಅವರು ದೂರುದಾರರ ಮನೆಗೆ ಪ್ರವೇಶಿಸಿ, ವಿದ್ಯುತ್‌ ಮತ್ತು ನೀರಿನ ಪೂರೈಕೆ ನಿಲ್ಲಿಸಿದ್ದಾರೆ. ಹೀಗಾಗಿ, ಕ್ರಮಕೈಗೊಳ್ಳಬೇಕು ಎಂದು ಮೇ 13ರಂದು ದೂರು ಸಲ್ಲಿಕೆಯಾಗಿದೆ ಎಂದು ಕೆಎಸ್‌ಎಚ್‌ಆರ್‌ಸಿ ಆದೇಶದಲ್ಲಿ ವಿವರಿಸಲಾಗಿದೆ.

ಇದಲ್ಲದೇ, ವಕೀಲೆ ಸುಧಾ ಕಟ್ವಾ ಅವರ ಮೂಲಕ ದೂರುದಾರೆಯು ಮೇ 16ರಂದು ಮತ್ತೊಂದು ದೂರು ಸಲ್ಲಿಸಿದ್ದಾರೆ. ಇದರಲ್ಲಿ ರಾಜು ನಾಯಕ್‌ ಮತ್ತು ಇತರರ ವಿರುದ್ಧ ಬಾಗಲಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಜೊತೆಗೂಡಿರುವ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮಕೈಗೊಂಡಿಲ್ಲ. ಅಲ್ಲದೇ, ಆರೋಪಿ ರಾಜು ನಾಯಕ್‌ ಅವರ ಹೆಸರನ್ನು ಎಫ್‌ಐಆರ್‌ನಿಂದ ಕೈಬಿಡಲಾಗಿದೆ ಎಂದು ದೂರಲಾಗಿದೆ. ಇದೆಲ್ಲವನ್ನೂ ಪರಿಗಣಿಸಿರುವ ಕೆಎಸ್‌ಎಚ್‌ಆರ್‌ಸಿಯು ದೂರಿನಲ್ಲಿ ಮಾಡಿರುವ ಆರೋಪಗಳು ನಿಜವಾದರೆ ಇದು ಸಂತ್ರಸ್ತರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.