Sangeetha kicked by Mahantesh Cholachagudda
Sangeetha kicked by Mahantesh Cholachagudda Vartha Bharati
ಸುದ್ದಿಗಳು

ವಕೀಲೆ ಸಂಗೀತಾ ಮೇಲೆ ಮಾರಣಾಂತಿಕ ಹಲ್ಲೆ: ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಬಾಗಲಕೋಟೆ ವಕೀಲರ ಸಂಘದ ಆಗ್ರಹ

Bar & Bench

ಬಾಗಲಕೋಟೆಯಲ್ಲಿ ವಕೀಲೆ ಸಂಗೀತಾ ಶಿಕ್ಕೇರಿ ಅವರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಸೋಮವಾರ ಬಾಗಲಕೋಟೆ ವಕೀಲರ ಸಂಘದ ವತಿಯಿಂದ ಕಲಾಪ ಬಹಿಷ್ಕರಿಸಿ, ಜಿಲ್ಲಾಧಿಕಾರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ವಕೀಲ ಡಿ ಬಿ ಪೂಜಾರ ಅವರ ನೇತೃತ್ವದಲ್ಲಿ ವಕೀಲರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ, ವಕೀಲೆ ಸಂಗೀತಾ ಅವರ ಮೇಲೆ ಹಲ್ಲೆ ಮಾಡಿದ್ದವರನ್ನು ಬಂಧಿಸಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ವಕೀಲರ ರಕ್ಷಣಾ ಕಾಯಿದೆಯನ್ನು ರಾಜ್ಯ ಸರ್ಕಾರವು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಬಾಗಲಕೋಟೆಯ ವಿನಾಯಕ ನಗರದ ಮೂರನೇ ಅಡ್ಡರಸ್ತೆಯಲ್ಲಿ ವಕೀಲೆ ಸಂಗೀತಾ ಅವರ ಮನೆ ಇದೆ. ಈ ಮನೆಗೆ ಸಂಬಂಧಿಸಿದಂತೆ ಸಂಗೀತಾ ಮತ್ತು ಅವರ ಕುಟುಂಬದವರ ನಡುವೆ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಮನೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಲು ಅಧೀನ ನ್ಯಾಯಾಲಯ ಸೂಚಿಸಿದೆ ಎನ್ನಲಾಗಿದೆ. ಇದರ ಮಧ್ಯೆ, ಸಂಗೀತಾ ಅವರ ದೊಡ್ಡಪ್ಪ ಅವರ ಕುಮ್ಮಕ್ಕಿನಿಂದ ಜೆಸಿಬಿ ಬಳಸಿ ಮನೆಯ ಕಾಂಪೌಂಡ್‌ ಅನ್ನು ಕೆಡವಲಾಗಿದೆ. ಇದು ಮಾತಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ಅಂತಿಮವಾಗಿ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಐವರ ಬಂಧನ: ಆರೋಪಿಗಳಾದ ಮಹಾಂತೇಶ್‌ ವಿರೂಪಾಕ್ಷಪ್ಪ, ಹನಮಂತಪ್ಪ ಶಿಕ್ಕೇರಿ, ರಾಜು ನಾಯ್ಕರ್‌, ಮುತ್ತಪ್ಪ ಶಿಕ್ಕೇರಿ ಮತ್ತು ಶಂಕರಪ್ಪ ಶಿಕ್ಕೇರಿ ಅವರ ವಿರುದ್ಧ ಬಾಗಲಕೋಟೆ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 354(ಬಿ) (ಮಹಿಳೆಯ ಮೇಲೆ ಹಲ್ಲೆ), 109 (ಕುಮ್ಮಕ್ಕು), 506 (ಕ್ರಿಮಿನಲ್‌ ಬೆದರಿಕೆ), 34 (ಏಕೈಕ ಉದ್ದೇಶದಿಂದ ಎಲ್ಲರೂ ಸೇರಿಕೊಳ್ಳುವುದು), 504 (ಶಾಂತಿಗೆ ಭಂಗ ಉಂಟು ಮಾಡುವ ಉದ್ದೇಶ), 307 (ಕೊಲೆ ಯತ್ನ), 323 (ಉದ್ದೇಶಪೂರ್ವಕವಾಗಿ ತೊಂದರೆ ಮಾಡುವುದು), 324 (ಮಾರಕಾಸ್ತ್ರದಿಂದ ಹಲ್ಲೆ) ಮತ್ತು 326ರ (ಮಾರಕಾಸ್ತ್ರದಿಂದ ಹಲ್ಲೆ) ಅಡಿ ಪ್ರಕರಣ ದಾಖಲಿಸಲಾಗಿದೆ.