Sangeetha kicked by Mahantesh Cholachagudda Vartha Bharati
ಸುದ್ದಿಗಳು

[ವಕೀಲೆ ಮೇಲೆ ಹಲ್ಲೆ ಪ್ರಕರಣ] ಮಹಾಂತೇಶ್‌ಗೆ ಚಪ್ಪಲಿ ಏಟು; ವಿವರಣೆ ನೀಡಲು ಸಂಗೀತಾಗೆ ಕೆಎಸ್‌ಬಿಸಿ ನೋಟಿಸ್‌

ವಕೀಲರ ಕಾಯಿದೆ 1961ರ ಅನ್ವಯ ವಕೀಲರಾಗಿ ನೋಂದಾಯಿಸಿಕೊಂಡು ಘನತೆಯುತ ವೃತ್ತಿಗೆ ಸೇರಿರುವ ನಿಮ್ಮ ವರ್ತನೆಯನ್ನು ಒಪ್ಪಲಾಗದು ಎಂದು ಕೆಎಸ್‌ಬಿಸಿ ನೋಟಿಸ್‌ನಲ್ಲಿ ವಿವರಿಸಲಾಗಿದೆ.

Bar & Bench

ಬಾಗಲಕೋಟೆಯಲ್ಲಿ ಮಹಾಂತೇಶ್‌ ಚೊಳಚಗುಡ್ಡ ಮತ್ತಿತರರು ಸಾರ್ವಜನಿಕವಾಗಿ ನಿಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದಕ್ಕೂ ಮುನ್ನ ತಾವು ಮಹಾಂತೇಶ್‌ ಅವರಿಗೆ ಚಪ್ಪಲಿಯಿಂದ ಹೊಡೆಯುವುದರ ಜೊತೆಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿರುವುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಮಹಿಳಾ ವಕೀಲೆ ಸಂಗೀತಾ ಶಿಕ್ಕೇರಿ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ಮಹಾಂತೇಶ್‌ ಅವರಿಗೆ ನೀವು ಚಪ್ಪಲಿಯಿಂದ ಹೊಡೆಯುವ ಮೂಲಕ ಪ್ರಚೋದನೆ ನೀಡಿದ್ದಲ್ಲದೇ, ಅವರನ್ನು ವಾಚಾಮಗೋಚರವಾಗಿ ನಿಂದಿಸುತ್ತಿರುವ ವಿಡಿಯೊ ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ. ವಕೀಲರ ಕಾಯಿದೆ 1961ರ ಅನ್ವಯ ವಕೀಲರಾಗಿ ನೋಂದಾಯಿಸಿಕೊಂಡು ಘನತೆಯುತ ವೃತ್ತಿಗೆ ಸೇರಿರುವ ನಿಮ್ಮ ವರ್ತನೆಯನ್ನು ಒಪ್ಪಲಾಗದು ಎಂದು ಕೆಎಸ್‌ಬಿಸಿ ನೋಟಿಸ್‌ನಲ್ಲಿ ವಿವರಿಸಲಾಗಿದೆ. ಹೀಗಾಗಿ, ನೋಟಿಸ್‌ ಸಿಕ್ಕ ಏಳು ದಿನಗಳ ಒಳಗೆ ಮೇಲೆ ಉಲ್ಲೇಖಿಸಿರುವ ನಿಮ್ಮ ನಡತೆಯ ಬಗ್ಗೆ ವಿವರಣೆ ನೀಡುವಂತೆ ಕೆಎಸ್‌ಬಿಸಿ ಕಾರ್ಯದರ್ಶಿ ಪುಟ್ಟೇಗೌಡ ಅವರು ನಿರ್ದೇಶಿಸಿದ್ದಾರೆ.

ಮೊದಲಿಗೆ ನಿಮ್ಮ ಮೇಲೆ ಮಹಾಂತೇಶ್‌ ಮತ್ತಿತರರು ದಾಳಿ ನಡೆಸುತ್ತಿರುವ ವಿಡಿಯೊ ಬಿಡುಗಡೆಯಾಗಿ ವೈರಲ್‌ ಆಗಿದ್ದು, ಇದರಿಂದ ಕೆಎಸ್‌ಬಿಸಿ ಸೇರಿದಂತೆ ವಕೀಲ ಸಮೂಹ ಹಾಗೂ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ, ಎರಡನೇ ವಿಡಿಯೊದಲ್ಲಿ ನೀವು ಮಹಾಂತೇಶ್‌ ಅವರಿಗೆ ಚಪ್ಪಲಿಯಲ್ಲಿ ಹೊಡೆದು ಪ್ರಚೋದನೆ ನೀಡಿರುವುದು ಮತ್ತು ಅವರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿರುವುದು ಸೆರೆಯಾಗಿದೆ ಎಂದು ವಿವರಿಸಲಾಗಿದೆ.

ಮೇ 14ರಂದು ಬಾಗಲಕೋಟೆಯಲ್ಲಿ ಆಸ್ತಿಗೆ ಸಂಬಂಧಿಸಿದ ವಿವಾದವೊಂದು ಕೈಮೀರಿ, ವಕೀಲೆ ಸಂಗೀತಾ ಶಿಕ್ಕೇರಿ ಎಂಬುವರ ಮೇಲೆ ಮಹಾಂತೇಶ್‌ ಚೊಳಚಗುಡ್ಡ ಅವರು ಸಾರ್ವಜನಿಕವಾಗಿ ಮಾರಣಾಂತಿಕ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಆಸ್ತಿ ವಿವಾದವು ಸುಪ್ರೀಂ ಕೋರ್ಟ್‌ ಮತ್ತು ಬಾಗಲಕೋಟೆಯ ಹಿರಿಯ ಸಿವಿಲ್‌ ನ್ಯಾಯಾಯಾಧೀಶರ ನ್ಯಾಯಾಲಯದಲ್ಲಿ ಬಾಕಿ ಇದೆ. ಮಧ್ಯಂತರ ತಡೆಯಾಜ್ಞೆಯನ್ನು ಉಲ್ಲಂಘಿಸಿ, ಹನುಮಂತಪ್ಪ ಶಿಕ್ಕೇರಿ ಅಲಿಯಾಸ್‌ ಯಲಿಗಾರ್‌ ಪ್ರೇರೇಪಣೆಗೆ ಒಳಗಾಗಿ ರಾಜಶೇಖರ್‌ ನಾಯ್ಕರ್‌ ಮತ್ತವರ ಬೆಂಬಲಿಗರು ಬಾಗಲಕೋಟೆಯ ವಿನಾಯಕ ನಗರದಲ್ಲಿರುವ ಸಂಗೀತಾ ಶಿಕ್ಕೇರಿ ಅವರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೇ ಹೊರಗಡೆಯಿಂದ ಅಕ್ರಮವಾಗಿ ಮನೆ ಬಾಗಿಲಿಗೆ ಬೀಗ ಜಡಿದಿದ್ದರು. ಅಲ್ಲದೇ, ಸಂಗೀತಾ, ಆಕೆಯ ಪತಿಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು ಎಂದು ಆರೋಪ ಮಾಡಲಾಗಿದೆ.

ಸಂಗೀತಾ ಅವರ ಮೇಲಿನ ದಾಳಿಯ ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (ಕೆಎಸ್‌ಎಚ್‌ಆರ್‌ಸಿ) ಪ್ರತ್ಯೇಕವಾಗಿ ಹಲ್ಲೆಗೊಳಲಾಗಿರುವ ಕುಟುಂಬದ ಸದಸ್ಯೆಯಾಗಿರುವ ಬೆಂಗಳೂರಿನ ನಾಗರಭಾವಿಯಲ್ಲಿ ನೆಲೆಸಿರುವ ಶಿವುಗೀತಾ ಮತ್ತು ವಕೀಲೆ ಸುಧಾ ಕಟ್ವಾ ದೂರು ನೀಡಿದ್ದರು. ಇದರ ವಿಚಾರಣೆ ನಡೆಸಿದ್ದ ಕೆಎಸ್‌ಎಚ್‌ಆರ್‌ಸಿ ಮುಖ್ಯಸ್ಥ ಹಾಗೂ ನಿವೃತ್ತ ನ್ಯಾಯಮೂರ್ತಿ ಡಿ ಎಚ್‌ ವಘೇಲಾ ಅವರು ಕೆಎಸ್‌ಎಚ್‌ಆರ್‌ಸಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ, ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಗಲಕೋಟೆ ನಗರಸಭೆ ಆಯುಕ್ತರಿಗೆ ನೋಟಿಸ್‌ ಜಾರಿ ಮಾಡಿದ್ದು, ಜೂನ್‌ 7ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ವಕೀಲೆ ಸಂಗೀತಾ ಅವರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಬಾಗಲಕೋಟೆ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ, ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೇ, ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿತ್ತು.

ವಕೀಲೆ ಸಂಗೀತಾ ಮತ್ತವರ ಕುಟುಂಬದ ಮೇಲೆ ದಾಳಿ ನಡೆಸಿದ್ದ ಆರೋಪಿಗಳಾದ ಮಹಾಂತೇಶ್‌ ವಿರೂಪಾಕ್ಷಪ್ಪ, ಹನಮಂತಪ್ಪ ಶಿಕ್ಕೇರಿ, ರಾಜು ನಾಯ್ಕರ್‌, ಮುತ್ತಪ್ಪ ಶಿಕ್ಕೇರಿ ಮತ್ತು ಶಂಕರಪ್ಪ ಶಿಕ್ಕೇರಿ ಅವರ ವಿರುದ್ಧ ಬಾಗಲಕೋಟೆ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 354(ಬಿ) (ಮಹಿಳೆಯ ಮೇಲೆ ಹಲ್ಲೆ), 109 (ಕುಮ್ಮಕ್ಕು), 506 (ಕ್ರಿಮಿನಲ್‌ ಬೆದರಿಕೆ), 34 (ಏಕೈಕ ಉದ್ದೇಶದಿಂದ ಎಲ್ಲರೂ ಸೇರಿಕೊಳ್ಳುವುದು), 504 (ಶಾಂತಿಗೆ ಭಂಗ ಉಂಟು ಮಾಡುವ ಉದ್ದೇಶ), 307 (ಕೊಲೆ ಯತ್ನ), 323 (ಉದ್ದೇಶಪೂರ್ವಕವಾಗಿ ತೊಂದರೆ ಮಾಡುವುದು), 324 (ಮಾರಕಾಸ್ತ್ರದಿಂದ ಹಲ್ಲೆ) ಮತ್ತು 326ರ (ಮಾರಕಾಸ್ತ್ರದಿಂದ ಹಲ್ಲೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ, ಸಂಗೀತಾ ಅವರ ಕುಟುಂಬದ ವಿರುದ್ಧ ಪ್ರತಿ ದೂರು ಸಹ ದಾಖಲಾಗಿದೆ.