ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ದಿವಂಗತ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ರೈ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅನುರಾಧ ರೈ ಪರ ಹೈಕೋರ್ಟ್ ವಕೀಲ ವೆಂಕಟೇಶ್ ಎಸ್.ಅರಬಟ್ಟಿ ಅವರು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ಏಕಸದಸ್ಯ ಪೀಠದ ಮುಂದೆ ಸೋಮವಾರ ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪೀಠವು “ಪ್ರಕರಣದ ವಿವರಣೆ ನೀಡಿ” ಎಂದು ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಮಂಗಳವಾರಕ್ಕೆ (ಏ.22) ಮುಂದೂಡಿತು.
ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ. ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಲು ಸಿದ್ಧವಿದ್ದೇನೆ. ಒಂದು ವೇಳೆ ಎಫ್‌ಐಆರ್‌ಗೆ ತಡೆ ನೀಡದಿದ್ದರೆ ತನಿಖೆಯ ನೆಪದಲ್ಲಿ ಕಿರುಕುಳ ಅನುಭವಿಸುವ ಸಾಧ್ಯತೆ ಇದೆ. ಹೀಗಾಗಿ, ಘಟನೆಗೆ ಸಂಬಂಧಿಸಿದಂತೆ ದಾಖಲಿಸಿರುವ ಎಫ್‌ಐಆರ್ ಹಾಗೂ ಈ ಕುರಿತಂತೆ ರಾಮನಗರ ವಿಚಾರಣಾ ನ್ಯಾಯಾಲಯದ ಮುಂದಿರುವ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದ್ದಾರೆ ಎಂದು ಅನುರಾಧಾ ಕೋರಿದ್ದಾರೆ.
ರಿಕ್ಕಿ ರೈ ಕಾರು ಚಾಲಕ ಬಸವರಾಜು ಅವರು ಬಿಡದಿಯ ಮನೆಯಿಂದ ಹೊರಡುವಾಗ ಮಧ್ಯರಾತ್ರಿ 1.30ರ ವೇಳೆಗೆ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ರಿಕ್ಕಿ ಅವರ ಮೂಗು ಮತ್ತು ತೋಳಿಗೆ ಗುಂಡು ತಗುಲಿ ತೀವ್ರರೀತಿಯ ಗಾಯಗಳಾಗಿವೆ ಎಂದು ದೂರು ನೀಡಿದ್ದರು. ರಿಕ್ಕಿ ರೈ ಅವರು ರಾಕೇಶ್ ಮಲ್ಲಿ, ಅನುರಾಧಾ, ನಿತೇಶ್ ಶೆಟ್ಟಿ, ವೈದ್ಯನಾಥನ್ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 109, 3(5) ಮತ್ತು ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 25 ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.