Karnataka HC and Justice V Srishananda 
ಸುದ್ದಿಗಳು

ಜಿಂಕೆ ಮಾಂಸ ಸೇವನೆ ಪ್ರಯತ್ನ: ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದು ಜೈಲುವಾಸ ಕಡಿತಗೊಳಿಸಿದ ಹೈಕೋರ್ಟ್‌

ವಶಪಡಿಸಿಕೊಳ್ಳಲಾದ ಮಾಂಸವು ವಾಸ್ತವದಲ್ಲಿ ಜಿಂಕೆಯದ್ದೇ ಅಥವಾ ಇಲ್ಲವೇ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಪೀಠವು "ಅದು ಕುರಿ ಮಾಂಸವಾಗಿದ್ದರೆ ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಬೆಂಕಿ ಹಾಕಿ ಬೇಯಿಸುವ ಅಗತ್ಯ ಬೀಳುತ್ತಿರಲಿಲ್ಲ" ಎಂದಿದೆ.

Bar & Bench

ಜಿಂಕೆ ಮಾಂಸ ಸೇವನೆ ಪ್ರಯತ್ನದಲ್ಲಿ ನಾಲ್ವರು ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ಈಚೆಗೆ ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್‌ ಜೈಲುವಾಸವನ್ನು ಕಡಿತ ಮಾಡಿದೆ [ಬೂತಪ್ಪ ಮತ್ತು ಇತರರು ವರ್ಸಸ್‌ ಕರ್ನಾಟಕ ರಾಜ್ಯ].

ವನ್ಯಜೀವಿ (ಸಂರಕ್ಷಣಾ) ಕಾಯಿದೆ ಸೆಕ್ಷನ್‌ 2(16)(ಬಿ), (ಸಿ), (35)(36) ಜೊತೆಗೆ  9 , 39, 50 ಹಾಗೂ 51 ಅಡಿ ದೋಷಿಗಳು ಎಂದು ಘೋಷಿಸಿ, ವಿಚಾರಣಾಧೀನ ನ್ಯಾಯಾಲಯವು ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಶಿವಮೊಗ್ಗ ಸೊರಬ ತಾಲ್ಲೂಕಿನ ನಾಲ್ವರು ಸಲ್ಲಿಸಿದ್ದ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

ವಶಪಡಿಸಿಕೊಳ್ಳಲಾದ ಮಾಂಸವು ವಾಸ್ತವದಲ್ಲಿ ಜಿಂಕೆಯದ್ದೇ ಅಥವಾ ಇಲ್ಲವೇ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಪೀಠವು ಅದು ಕುರಿ ಮಾಂಸವಾಗಿದ್ದರೆ ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಬೆಂಕಿ ಹಾಕಿ ಬೇಯಿಸುವ ಅಗತ್ಯ ಬೀಳುತ್ತಿರಲಿಲ್ಲ ಎಂದಿದೆ.

“ವಶಪಡಿಸಿಕೊಳ್ಳಲಾದ ಅರೆಬೆಂದ ಮಾಂಸದ ಬಗ್ಗೆ ಮಾತ್ರ ವಿವಾದವಿದ್ದು, ಅದು ಕುರಿ ಮಾಂಸವಾಗಿದ್ದರೆ ಅದನ್ನು ಅರ್ಜಿದಾರರು ನಿರ್ಜನ ಪ್ರದೇಶದಲ್ಲಿ ಕಂದೀಲು ಹಚ್ಚಿಕೊಂಡು ಬೆಂಕಿಯಲ್ಲಿ ಬೇಯಿಸುವ ಅಗತ್ಯವಿರಲಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಆರೋಪಿಗಳು 60 ಮತ್ತು 70 ವರ್ಷದವರಾಗಿದ್ದು, ಈಗಾಗಲೇ ಅವರು ಅನುಭವಿಸಿರುವ ಜೈಲುವಾಸಕ್ಕೆ ಶಿಕ್ಷೆಯನ್ನು ಮಿತಿಗೊಳಿಸಿ, ತಲಾ ₹25 ಸಾವಿರ ದಂಡ ವಿಧಿಸಿ ಆದೇಶ ಮಾಡಿದೆ.

ಕೆಲವರು ಪ್ರಾಣಿಯೊಂದನ್ನು ಬೇಟೆಯಾಡಿ ಅದನ್ನು ನಿರ್ಜನ ಪ್ರದೇಶದಲ್ಲಿ ಸೇವಿಸಲು ಮುಂದಾಗಿದ್ದಾರೆ ಎಂಬ ಮಾಹಿತಿಯು ಅರಣ್ಯ ಇಲಾಖೆಗೆ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾಗ ಅರೆಬೆಂದ ಮಾಂಸ, ಪ್ರಾಣಿಯ ತಲೆ ಮತ್ತು ಕೆಲವು ಮೂಳೆಗಳು ಸ್ಥಳದಲ್ಲಿ ಪತ್ತೆಯಾಗಿದ್ದವು ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು. ಇದನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳನ್ನು ದೋಷಿಗಳು ಎಂದಿತ್ತು. ಇದನ್ನು ಜಿಲ್ಲಾ ನ್ಯಾಯಾಲಯವು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪಶು ವೈದ್ಯ ತಜ್ಞರು ಮೌಖಿಕವಾಗಿ ನೀಡಿರುವ ಸಾಕ್ಷ್ಯದ ಪ್ರಕಾರ ಆರೋಪಿಗಳು ಎರಡು ಜಿಂಕೆಗಳನ್ನು ಕೊಂದಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳಿಗೆ ಆರೋಪಿಗಳ ವಿರುದ್ಧ ಯಾವುದೇ ದ್ವೇಷವಿಲ್ಲ. ಘಟನಾ ಸ್ಥಳದಲ್ಲಿ ಲಭ್ಯವಿರುವ ವಸ್ತುಗಳನ್ನು ನೋಡಿದರೆ ಆರೋಪಿಗಳು ಜಿಂಕೆ ಮಾಂಸ ಬೇಯಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.

ಅರ್ಜಿದಾರರ ಪರವಾಗಿ ವಕೀಲರಾದ ಪಿ ಬಿ ಉಮೇಶ್‌ ಮತ್ತು ಆರ್‌ ಬಿ ದೇಶಪಾಂಡೆ ವಾದಿಸಿದ್ದರು. ಸರ್ಕಾರವನ್ನು ವಕೀಲರಾದ ಕೆ ನಾಗೇಶ್ವರಪ್ಪ ಪ್ರತಿನಿಧಿಸಿದ್ದರು.

Boothappa and Ors vs The State of Karnataka.pdf
Preview