Doctors 
ಸುದ್ದಿಗಳು

ಎಂಬಿಬಿಎಸ್ ಕೋರ್ಸ್‌ಗೆ ಹಾಜರಾತಿ ಕಡ್ಡಾಯ: ರಾಜಸ್ಥಾನ ಹೈಕೋರ್ಟ್

ಶೈಕ್ಷಣಿಕ ಗುಣಮಟ್ಟ ಕೆಳಮಟ್ಟಕ್ಕೆ ಇಳಿಯಲು ಬಿಡಬಾರದು ಎಂದು ಒತ್ತಿ ಹೇಳಿದ ಹೈಕೋರ್ಟ್.

Bar & Bench

ತರಗತಿಗಳ ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆ ಬರೆಯಲು ಅವಕಾಶ ದೊರೆಯದ ಎಂಟು ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ [ಸುರೇಂದ್ರ ಬಿಸ್ನೋಯ್‌ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].

ಸಾರ್ವಜನಿಕರಿಗೆ ಒದಗಿಸುವ ಆರೋಗ್ಯ ಸೇವೆಯ ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ವೈದ್ಯಕೀಯ ಶಿಕ್ಷಣದಲ್ಲಿ ಅತ್ಯುನ್ನತ ಗುಣಮಟ್ಟ ಕಾಯ್ದುಕೊಳ್ಳುವುದರ ಪ್ರಾಮುಖ್ಯತೆ ಏನೆಂಬುದನ್ನು ಹೆಚ್ಚು ವಿವರಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ವಿನಿತ್ ಕುಮಾರ್ ಮಾಥುರ್ ಹೇಳಿದರು.

ಸಮರ್ಥ ವೈದ್ಯರಾಗಲು ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳು ಸಾಕಷ್ಟು ಸಜ್ಜಾಗಿರುವುದಕ್ಕಾಗಿ ಹಾಜರಾತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂದು ಪೀಠ ಒತ್ತಿ ಹೇಳಿದೆ.

ವಿದ್ಯಾರ್ಥಿ ಪಠ್ಯ ಮತ್ತು ಪ್ರಾಯೋಗಿಕ ತರಗತಿಗಳೆರಡರಲ್ಲೂ  ಅಗತ್ಯ ಹಾಜರಾತಿ ಪಡೆಯದಿದ್ದವರಿಗೆ ಎರಡನೇ ವರ್ಷದ ಪರೀಕ್ಷೆಗೆ ಕೋರ್ಸ್‌ ಮುಂದುವರೆಸಲು ಅವಕಾಶ ನೀಡುವುದು ಹಾನಿಕಾರಕ ಎಂದು ನ್ಯಾಯಾಲಯ ಹೇಳಿದೆ.

ಬಾರ್ಮರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬರು ಡೆಂಗಿ ಜ್ವರದಿಂದಾಗಿ ಮೊದಲ ವರ್ಷದ ಪರೀಕ್ಷೆ ಮತ್ತು ಪೂರಕ ಪರೀಕ್ಷೆ ಬರೆಯಲಾಗದೆ ಇದ್ದುದರಿಂದ ನ್ಯಾಯಾಲಯದ ಮೊರೆ ಹೋಗಿದ್ದರು.

ಅರ್ಜಿದಾರರು ಹಾಜರಾತಿ ಕೊರತೆಯಿಂದಾಗಿ ಮುಖ್ಯ ಪರೀಕ್ಷೆಗೆ ಹಾಜರಾಗದ ಕಾರಣ, ಪೂರಕ ಪರೀಕ್ಷೆಗೆ ಬರೆಯಲು ಅವರಿಗೆ ಅವಕಾಶ ನೀಡಬಾರದು ಎಂದು ಪ್ರತಿವಾದಿಗಳ ಪರ ವಕೀಲರು ಹೇಳಿದರು.

ಎಂಬಿಬಿಎಸ್ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪರೀಕ್ಷೆ ಬರೆಯಲು ಅರ್ಹತೆ ಪಡೆಯಲು ಥಿಯರಿಯಲ್ಲಿ ಶೇ. 75 ರಷ್ಟು ಹಾಜರಾತಿ ಮತ್ತು ಪ್ರಾಯೋಗಿಕ ಮತ್ತು ಕ್ಲಿನಿಕಲ್ ಅವಧಿಗಳಲ್ಲಿ ಶೇ. 80 ರಷ್ಟು ಹಾಜರಾತಿ ಪಡೆದಿರಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಹೈಕೋರ್ಟ್‌ ಈ ಹಿಂದೆ ಇಂಥದ್ದೇ ಪ್ರಕರಣದಲ್ಲಿ ಒಬ್ಬ ವಿದ್ಯಾರ್ಥಿಗೆ ಪರಿಹಾರ ನೀಡಿತ್ತಾದರೂ ಆತ ಒಂದು ವಿಷಯದಲ್ಲಿ ಮಾತ್ರ ಹಾಜರಾತಿ ಕೊರತೆ ಎದುರಿಸುತ್ತಿದ್ದ. ಈ ಪ್ರಕರಣದಲ್ಲಿ ಅರ್ಜಿದಾರರು ಎಲ್ಲಾ ವಿಷಯಗಳಲ್ಲೂ ಹಾಜರಾತಿ ಕೊರತೆ ಎದುರಿಸುತ್ತಿದ್ದಾರೆ ಎಂದು ವಾದಿಸಲಾಯಿತು.

ವಾದ ಪುರಸ್ಕರಿಸಿದ ನ್ಯಾಯಾಲಯ, ಎಂಬಿಬಿಎಸ್ ಪದವಿ ಎಂಬುದು ಆತ್ಯಂತಿಕವಾಗಿ ಮನುಷ್ಯರಿಗೆ ವೈದ್ಯಕೀಯ ಚಿಕಿತ್ಸೆ ನೀಡುವವರ ಸಲುವಾಗಿ ಇರುವುದರಿಂದ  ಅದಕ್ಕೆ ಗಮನಾರ್ಹ ಪ್ರಾಮುಖ್ಯತೆ ಇದೆ ಎಂದಿತು.  

ಶೈಕ್ಷಣಿಕ ಗುಣಮಟ್ಟ ಕೆಳಮಟ್ಟಕ್ಕೆ ಇಳಿಯಲು ಬಿಡಬಾರದು ಎಂದು ಹೈಕೋರ್ಟ್ ಎಂಟು ವಿದ್ಯಾರ್ಥಿಗಳ ಅರ್ಜಿಗಳನ್ನು ವಜಾಗೊಳಿಸಿತು.