KAT Chairman Justice (Rtd) R B Budihal
KAT Chairman Justice (Rtd) R B Budihal 
ಸುದ್ದಿಗಳು

ಅತ್ತಿಬೆಲೆ ಪಟಾಕಿ ದುರಂತ: ಮೂವರು ಅಧಿಕಾರಿಗಳ ಅಮಾನತು ಆದೇಶ ಪುರಸ್ಕರಿಸಿದ ಕೆಎಟಿ

Bar & Bench

ಅತ್ತಿಬೆಲೆ ಬಾಲಾಜಿ ಟ್ರೇಡರ್ಸ್‌ಗೆ ಸೇರಿದ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 14 ಮಂದಿ ಕಾರ್ಮಿಕರು ಸಾವನ್ನಪ್ಪಿದ ಪ್ರಕರಣ ಸಂಬಂಧ ಮೂವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಾಧಿಕರಣ (ಕೆಎಟಿ) ಪುರಸ್ಕರಿಸಿದೆ.

ಅಮಾನತು ಆದೇಶ ರದ್ದುಪಡಿಸುವಂತೆ ಕೋರಿ ಆನೇಕಲ್‌ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಅತ್ತಿಬೆಲೆ ವೃತ್ತ ಕಂದಾಯ ನಿರೀಕ್ಷಕ ಎ ಪುಷ್ಪರಾಜ್ ಮತ್ತು ಅತ್ತಿಬೆಲೆ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಭಾಗೇಶ್ ಹೊಸಮನಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಕೆಎಟಿ ಮುಖ್ಯಸ್ಥರಾದ ಆರ್‌ ಬಿ ಬೂದಿಹಾಳ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಸರ್ಕಾರದ ವಕೀಲ ಜಿ ರಮೇಶ್‌ ನಾಯ್ಕ್‌ ಅವರು, ಅವಘಡ ಸಂಭವಿಸಿರುವ ಗೋದಾಮಿನ ಮಾಲೀಕರಾದ ವಿ ರಾಮಸ್ವಾಮಿ ರೆಡ್ಡಿ ಎಂಬುವರಿಗೆ ಹಸಿರು ಪಟಾಕಿ ಸಂಗ್ರಹ ಹಾಗೂ ಮಾರಾಟ ಮಾಡಲು ಅರ್ಜಿದಾರ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಅನುಮತಿ ನೀಡುವ ಮುನ್ನ ಸ್ಥಳ ಪರಿಶೀಲನೆ ನಡೆಸಿಲ್ಲ. ಗೋದಾಮು ಮಾಲೀಕರು ಪೊಲೀಸ್‌ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿಲ್ಲ. ಗೋದಾಮಿನಲ್ಲಿ ಅಗ್ನಿ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಹೀಗಿದ್ದರೂ ಗೋದಾಮಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಂಗ್ರಹಕ್ಕೆ ಅನುಮತಿ ನೀಡಲಾಗಿತ್ತು. ಇಲ್ಲಿ ಅರ್ಜಿದಾರರ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪವಿದೆ. ಆದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ಪೀಠವು ಅರ್ಜಿಗಳನ್ನು ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: ಅತ್ತಿಬೆಲೆ ಗೋದಾಮಿನಲ್ಲಿ ಅಕ್ಟೋಬರ್‌ 7ರಂದು ಅಗ್ನಿ ಅವಘಡ ಸಂಭವಿಸಿತ್ತು. ಗೋದಾಮಿನ ಮಾಲೀಕರಾದ ವಿ ರಾಮಸ್ವಾಮಿ ರೆಡ್ಡಿ ಅವರು ಬೆಂಗಳೂರಿನಲ್ಲಿ ವಿವಿಧೆಡೆಗೆ ಪಟಾಕಿ ಪೂರೈಸುತ್ತಾರೆ. ದೀಪಾವಳಿ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಪಟಾಕಿಯನ್ನು ತಂದು ಗೋದಾಮಿನಲ್ಲಿ ಇರಿಸಿದ್ದರು. ಈ ವೇಳೆ 29ಕ್ಕೂ ಹೆಚ್ಚಿನ ಕಾರ್ಮಿಕರು ಅನ್‌ಲೋಡ್‌ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಪಟಾಕಿ ಸ್ಫೋಟಗೊಂಡಿತ್ತು. ಗೋದಾಮು ಸಂಪೂರ್ಣ ಸುಟ್ಟುಹೋಗಿ ಸುಮಾರು 12 ಮಂದಿ ಸಜೀವ ದಹನವಾಗಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದರು. ಘಟನೆ ನಡೆದ ಬೆನ್ನಲ್ಲೇ ಅರ್ಜಿದಾರರನ್ನು ಸೇವೆಯಿಂದ ಅಮಾನತುಪಡಿಸಿ ಸರ್ಕಾರ ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ಅಕ್ಟೋಬರ್‌ 17ರಂದು ಅರ್ಜಿದಾರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು.

ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಮ್ಯಾಜಿಸ್ಟೀರಿಯಲ್‌ ತನಿಖೆಗೆ ಅಕ್ಟೋಬರ್‌ 17ರಂದು ಆದೇಶಿಸಿತ್ತು. ೆ ಕುರಿತು ವಿಚಾರಣಾಧಿಕಾರಿ ಆದೇಶ ಹೊರಡಿಸಿದ ದಿನಾಂಕದಿಂದ ಮೂರು ತಿಂಗಳ ಒಳಗೆ ಮಾಜಿಸ್ಟೀರಿಯಲ್‌ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು