ಬೆಂಗಳೂರು ನಗರ ಜಿಲ್ಲೆಯ ಅತ್ತಿಬೆಲೆ ಬಾರ್ಡರ್‌ನ ಬಾಲಾಜಿ ಟ್ರೇಡರ್ಸ್‌ನ ಪಟಾಕಿ ದಾಸ್ತಾನಿನಲ್ಲಿ ಈಚೆಗೆ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಮ್ಯಾಜಿಸ್ಟೀರಿಯಲ್ ತನಿಖೆಗೆ ಮಂಗಳವಾರ ಆದೇಶಿಸಿದೆ.
ಅಕ್ಟೋಬರ್ 7ರಂದು ಸಂಭವಿಸದ ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ವಿಚಾರಣಾಧಿಕಾರಿ ಆದೇಶ ಹೊರಡಿಸಿದ ದಿನಾಂಕದಿಂದ ಮೂರು ತಿಂಗಳ ಒಳಗೆ ಮಾಜಿಸ್ಟೀರಿಯಲ್ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ ಹಾಗೂ ಸನ್ನಿವೇಶಗಳ ಬಗ್ಗೆ ಮತ್ತು ಬಾಲಾಜಿ ಟ್ರೇಡರ್ಸ್, ಪಟಾಕಿ ದಾಸ್ತಾನು ಮಳಿಗೆಗೆ ಸ್ಫೋಟಕ ಕಾಯಿದೆ ಸೆಕ್ಷನ್ 6ರ ಅನ್ವಯ ಸ್ಥಳ ತನಿಖೆ ನಡೆಸಿ, ಸೂಕ್ತ ದಾಖಲೆ ಪಡೆದು ನಿಯಮಾನುಸಾರ ಪರವಾನಗಿ ನೀಡಲಾಗಿದೆಯೇ, ಇದರಲ್ಲಿ ಲೋಪ ಉಂಟಾಗಿದ್ದಲ್ಲಿ ಅದರ ವಿವರ, ಲೋಪಕ್ಕೆ ಕಾರಣರಾದವರು, ಅವಘಡ ಆಕಸ್ಮಿಕವೇ ಅಥವಾ ನಿರ್ಲಕ್ಷ್ಯದಿಂದ ಆಗಿದೆಯೇ, ಅವಘಡದಿಂದ ಆಗಿರುವ ನಷ್ಟದ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ವಿಚಾರಣಾಧಿಕಾರಿಗೆ ನಿರ್ದೇಶಿಸಲಾಗಿದೆ.
ಈಚೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದರ ಪರಿಶೀಲನೆ ನಡೆಸಿದ್ದ ರಾಜ್ಯ ಸರ್ಕಾರವು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದೆ. ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಸಿಐಡಿ ತನಿಖೆ ನಡೆಸುತ್ತಿದೆ.