ರಾಜ್ ದೀಪ್ ಸರ್ದೇಸಾಯಿ 
ಸುದ್ದಿಗಳು

[ಬ್ರೇಕಿಂಗ್] ಪತ್ರಕರ್ತ ರಾಜ್ ದೀಪ್ ವಿರುದ್ಧ ನಿಂದನಾ ಪ್ರಕ್ರಿಯೆ ಆರಂಭಿಸಲು ಅನುಮತಿ ನಿರಾಕರಿಸಿದ ಎಜಿ ವೇಣುಗೋಪಾಲ್

“ಕ್ಷುಲ್ಲಕ ಹೇಳಿಕೆ ಮತ್ತು ಬೀಸು ಟೀಕೆಯು ಅಭಿರುಚಿಹೀನ ಎನಿಸಿದರೂ ಅದರಿಂದ ಸಂಸ್ಥೆಯ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದೆನಿಸದು,” ಎಂದು ನಿಂದನಾ ಪ್ರಕ್ರಿಯೆಗೆ ಅನುಮತಿ ನಿರಾಕರಿಸಿರುವ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಹೇಳಿದ್ದಾರೆ.

Bar & Bench

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ₹1 ಜುಲ್ಮಾನೆ ಶಿಕ್ಷೆ ವಿಧಿಸಿದ್ದ ಸುಪ್ರೀಂ ಕೋರ್ಟ್‌ ಹಾಗೂ ನ್ಯಾಯಾಂಗವನ್ನು ಟೀಕಿಸಿ ಟ್ವೀಟ್‌ಗಳನ್ನು ಮಾಡಿದ್ದ ಹಿರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸುವ ಕೋರಿಕೆಗೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅನುಮತಿ ನಿರಾಕರಿಸಿದ್ದಾರೆ.

ಸರ್ದೇಸಾಯಿ ಅವರ ಐದು ಟ್ವೀಟ್‌ಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದ ಮನವಿದಾರರಾದ ಆಸ್ಥಾ ಖುರಾನಾ ಅವರಿಗೆ ಅಟಾರ್ನಿ ಜನರಲ್ ವೇಣುಗೋಪಾಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

“ಸರ್ದೇಸಾಯಿ ಅವರ ಟ್ವೀಟ್‌ಗಳು ಅಂಥ ಗಂಭೀರವಾದಂಥವೇನಲ್ಲ ಮತ್ತು ಸಾರ್ವಜನಿಕರ ಮನದಲ್ಲಿ ಸುಪ್ರೀಂ ಕೋರ್ಟ್‌ನ ಘನತೆಯನ್ನು ಕುಗ್ಗಿಸುವಂತಿಲ್ಲ. ನಮ್ಮ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಅಂಗವಾದ ಸುಪ್ರೀಂ ಕೋರ್ಟ್‌ನ ಘನತೆಯನ್ನು ಕಳೆದ 70 ವರ್ಷಗಳಲ್ಲಿ ನಿಸ್ಸಂಶಯವಾಗಿ ಕಟೆದು ನಿಲ್ಲಿಸಲಾಗಿದೆ.”
“ಕ್ಷುಲ್ಲಕ ಹೇಳಿಕೆ ಮತ್ತು ಬೀಸು ಟೀಕೆಯು ಅಭಿರುಚಿಹೀನ ಎನಿಸಿದರೂ ಅದರಿಂದ ಸಂಸ್ಥೆಯ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದೆನಿಸದು.”
ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್

“ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂಥ ಯಾವುದೇ ಸಮರ್ಥನೆ ನನಗೆ ಕಾಣುತ್ತಿಲ್ಲ. ಆದ್ದರಿಂದ ನಿಂದನಾ ಪ್ರಕ್ರಿಯೆ ಆರಂಭಿಸಲು ನಿರಾಕರಿಸುತ್ತೇನೆ” ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ಅಡ್ವೊಕೇಟ್ ಆನ್ ರೆಕಾರ್ಡ್‌ ವಕೀಲರಾದ ಓಂ ಪ್ರಕಾಶ್ ಪರಿಹಾರ್ ಮತ್ತು ದುಷ್ಯಂತ್ ತಿವಾರಿ ಅವರ ಮೂಲಕ ಆಸ್ಥಾ ಖುರಾನಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪನ್ನು ಟ್ವೀಟ್ ಮೂಲಕ ಟೀಕಿಸಿದ್ದ 'ಇಂಡಿಯಾ ಟುಡೇ’ ಸುದ್ದಿ ನಿರೂಪಕ ರಾಜ್ ದೀಪ್ ಸರ್ದೇಸಾಯಿ ಅವರ ನಡೆ “ಕೀಳು ಪ್ರಚಾರದ ಗೀಳು” ಎಂದು ಅರ್ಜಿಯಲ್ಲಿ ದೂರಿದ್ದಾರೆ.