Guruvayur Temple guruvayurdevaswom.in
ಸುದ್ದಿಗಳು

ಗುರುವಾಯೂರು ದೇಗುಲದಲ್ಲಿ ಹಣಕಾಸು ಅವ್ಯವಹಾರ: ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ ಲೆಕ್ಕಪರಿಶೋಧನಾ ವರದಿಯಿಂದ ಬಹಿರಂಗ

ವಿವಿಧ ಆರ್ಥಿಕ ಅಕ್ರಮಗಳು, ದೇವಾಲಯದ ನಿಧಿ ದುರುಪಯೋಗ ಮತ್ತು ಸೈಬರ್ ಭದ್ರತಾ ಶಿಷ್ಟಾಚಾರಗಳಲ್ಲಿ ಲೋಪ ಉಂಟಾಗಿರುವುದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

Bar & Bench

ಗುರುವಾಯೂರು ದೇವಸ್ಥಾನದ ಬ್ಯಾಂಕ್‌ ಖಾತೆಗಳಲ್ಲಿ ಹಣಕಾಸು ಅಕ್ರಮ ಉಂಟಾಗಿರುವುದು, ದೇವಾಲಯದ ಅಧಿಕಾರಿಗಳು ಆದಾಯ ಮತ್ತು ವೆಚ್ಚ ಕುರಿತ ಲೆಕ್ಕಪತ್ರಗಳನ್ನು ಅಸಮರ್ಪಕವಾಗಿ ನಿರ್ವಹಿಸಿರುವುದನ್ನು ಬಹಿರಂಗಪಡಿಸಿರುವ ಲೆಕ್ಕಪರಿಶೋಧನಾ ವರದಿಯನ್ನು ಕೇರಳ ಹೈಕೋರ್ಟ್‌ಗೆ ಗುರುವಾರ ಸಲ್ಲಿಸಲಾಗಿದೆ [ಡಾ. ಪಿ.ಎಸ್. ಮಹೇಂದ್ರ ಕುಮಾರ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಗುರುವಾಯೂರು ದೇವಸ್ವಂ ವ್ಯವಸ್ಥಾಪಕ ಸಮಿತಿ ಹಣಕಾಸು ಖಾತೆಗಳ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಅಫಿಡವಿಟ್‌ನಲ್ಲಿ ಗಂಭೀರ ಆರೋಪಗಳಿವೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಮುರಳಿ ಕೃಷ್ಣ ಎಸ್ ಅವರಿದ್ದ ಪೀಠ  ತಿಳಿಸಿತು.

ಅಫಿಡವಿಟ್‌ಗೆ ಪ್ರತಿಕ್ರಿಯೆ ಇನ್ನು ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸಮಿತಿಗೆ ಗಡುವು ವಿಧಿಸಿರುವ ನ್ಯಾಯಾಲಯ ಅಫಿಡವಿಟ್ ಸಲ್ಲಿಸುವಲ್ಲಿ 71 ದಿನಗಳ ವಿಳಂಬ ಉಂಟಾಗಿರುವುದನ್ನು ಮನ್ನಿಸಿತು. ಕೇರಳ ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯ ಹಿರಿಯ ಉಪನಿರ್ದೇಶಕ ರಾಜೀವ್ ಆರ್ ಅವರು ಅಫಿಡವಿಟ್‌ ಸಲ್ಲಿಸಿದರು.

ತ್ರಿಶೂರ್‌ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಣಕಾಸಿನ ದುರುಪಯೋಗ ಮತ್ತು ಬ್ಯಾಂಕಿಂಗ್‌ ಹಗರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದ ಡಾ. ಪಿ ಎಸ್ ಮಹೇಂದ್ರ ಕುಮಾರ್ ಸಹಕಾರಿ ಸಂಘಗಳಲ್ಲಿನ ತನ್ನ ಠೇವಣಿಗಳ ವಿವರಗಳನ್ನು ಬಹಿರಂಗಪಡಿಸಲು ದೇವಸ್ವಂಗೆ ನ್ಯಾಯಾಲಯದ ನಿರ್ದೇಶನ ನೀಡುವಂತೆ ಕೋರಿದ್ದರು.

ವಿವಿಧ ಆರ್ಥಿಕ ಅಕ್ರಮಗಳ ಬಗ್ಗೆ, ದೇವಾಲಯದ ನಿಧಿ ದುರುಪಯೋಗದ ಬಗ್ಗೆ ಮತ್ತು ಸೈಬರ್ ಭದ್ರತಾ ಶಿಷ್ಟಾಚಾರಗಳಲ್ಲಿ ಲೋಪ ಉಂಟಾಗಿರುವ ಕುರಿತಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ದೇವಸ್ಥಾನದ ಸೂಪರಿಂಟೆಂಡೆಂಟ್‌, ಮ್ಯಾನೇಜರ್‌ ಮತ್ತು ಡೆಪ್ಯೂಟಿ ಅಡ್ಮಿನಿಸ್ಟ್ರೇಟರ್‌ ಅವರು ಸಂಗ್ರಹಿಸಲಾದ ಹಣವನ್ನು ಸರಿಯಾಗಿ ಠೇವಣಿ ಇರಿಸುವಲ್ಲಿಯೂ ಸಹ ವಿಫಲರಾಗಿದ್ದಾರೆ ಎನ್ನುವ ಬಗ್ಗೆಯೂ ಅಫಿಡವಿಟ್‌ ಬೆರಳು ಮಾಡಿದೆ.