Karnataka HC and Justice Suraj Govindaraj
Karnataka HC and Justice Suraj Govindaraj 
ಸುದ್ದಿಗಳು

ಇಲಾಖೆಗಳು ಮನವಿಗಳನ್ನು ಹಾಗೆಯೇ ಇರಿಸಿಕೊಂಡು ಕೂರಬಾರದು: ಕರ್ನಾಟಕ ಹೈಕೋರ್ಟ್‌

Siddesh M S

“ಸರ್ಕಾರದ ಇಲಾಖೆಗಳಿಗೆ ಮನವಿ ಸಲ್ಲಿಸಿದಾಗ ಅದನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಇಲಾಖೆಗಳು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಅಗತ್ಯ. ಇಲಾಖೆಗಳು ಮನವಿಯನ್ನು ಹಾಗೆಯೇ ಸುಮ್ಮನೆ ಇರಿಸಿಕೊಂಡು ಕೂರಬಾರದು. ಇದರಿಂದ ಅರ್ಜಿದಾರಂಥ ನಾಗರಿಕರು ನ್ಯಾಯಾಲಯದ ಕದ ತಟ್ಟುವುದು ಅನಿವಾರ್ಯವಾಗುತ್ತದೆ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆಕ್ರೋಶ ವ್ಯಕ್ತಪಡಿಸಿದೆ.

ಹಾಸನ ಜಿಲ್ಲೆಯ ಸಕಲೇಶಪುರದ ದೋಣಿಗಲ್‌ ಗ್ರಾಮದ ನಿವಾಸಿ ರಾಣಿ ಮಲ್ಲೇಶ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿದೆ.

ಅರ್ಜಿದಾರರು ಪರಿಹಾರ ಕೋರಿ 2019ರ ಜನವರಿ 17 ಮತ್ತು ಏಪ್ರಿಲ್‌ 7ರಂದು ಸಲ್ಲಿಸಿರುವ ಮನವಿಗಳನ್ನು ಈ ಆದೇಶ ಸಿಕ್ಕ ಎಂಟು ವಾರಗಳಲ್ಲಿ ಪರಿಗಣಿಸಿಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನಿರ್ದೇಶಿಸಿದೆ.

ನ್ಯಾಯಾಲಯದ ಆದೇಶದ ಪ್ರತಿಯನ್ನು ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಇದರ ಪ್ರತಿ ಪಡೆದು ಪ್ರತಿವಾದಿಗಳು ಆದೇಶ ಪಾಲಿಸಬೇಕು. ಇಲ್ಲವೇ ಅರ್ಜಿದಾರರು ಆದೇಶದ ಪ್ರತಿ ನೀಡಿದರೆ ಅದನ್ನು ಪರಿಗಣಿಸಬೇಕು. ದೃಢೀಕೃತ ಆದೇಶದ ಪ್ರತಿಗಾಗಿ ಕಾಯಬಾರದು. ಆದೇಶದ ಬಗ್ಗೆ ಅನುಮಾನಗಳಿದ್ದರೆ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಅಥವಾ ಪ್ರಕರಣದಲ್ಲಿ ಸರ್ಕಾರವನ್ನು ಪ್ರತಿನಿಧಿಸಿರುವ ವಕೀಲರನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದು. ಆದೇಶದ ಮೇಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿ ಆದೇಶ ಪರಿಶೀಲಿಸಿಕೊಳ್ಳಬಹುದು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರೆ ರಾಣಿ ಮಲ್ಲೇಶ್‌ ಅವರು ದೋಣಿಗಲ್‌ ಗ್ರಾಮದ ಸರ್ವೇ ನಂ. 15/3ರಲ್ಲಿ 37 ಗುಂಟೆ ಹಾಗೂ ಸರ್ವೇ ನಂ. 23ರಲ್ಲಿ 1.29 ಎಕರೆ ಜಮೀನು ಹೊಂದಿದ್ದಾರೆ. ಪ್ರತಿವಾದಿಗಳಾದ ಎನ್‌ಎಚ್‌ಎಐನ ಪ್ರಾದೇಶಿಕ ಕಚೇರಿ, ಎನ್‌ಎಚ್‌ಐಎ ಹಾಸನದ ಘಟಕದ ಯೋಜನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ-75ರ ಹಾಸನ ವಿಭಾಗ ಸಕಲೇಶಪುರದ ವಿಶೇಷ ಭೂಸ್ವಾಧೀನ ಅಧಿಕಾರಿ ಅವರು ರಸ್ತೆ ಅಗಲೀಕರಣ ಮಾಡುವಾಗ ಅದನ್ನು ಸರಿಯಾಗಿ ಮಾಡಿಲ್ಲ ಎಂಬುದು ಅರ್ಜಿದಾರರ ದೂರು.

ಇದರಿಂದ ನಾಲೆಯಲ್ಲಿ ನೀರು ತುಂಬಿ ಅದು ತಮ್ಮ 10 ವರ್ಷದ ಕಾಫಿ ತೋಟಕ್ಕೆ ನುಗ್ಗಿ, ಫಸಲು ಹಾಳು ಮಾಡಿದೆ. ಹೀಗಾಗಿ, ವಿಶೇಷ ಭೂಸ್ವಾಧೀನ ಅಧಿಕಾರಿಗೆ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿತ್ತು. ಆನಂತರ ಕಾನೂನು ಪ್ರಕಾರ ನೋಟಿಸ್‌ ಸಹ ಕಳುಹಿಸಿದ್ದರು.

ಇದರ ಅನ್ವಯ ಯೋಜನಾಧಿಕಾರಿಯು 2019ರ ಫೆಬ್ರವರಿ 8 ಮತ್ತು 2019ರ ಜೂನ್‌ 17ರಂದು ರಾಣಿ ಅವರ ಮನವಿ ಪರಿಶೀಲಿಸುವಂತೆ ಪತ್ರ ಬರೆದಿದ್ದರು. ಆದರೂ, ಯಾವುದೇ ಕ್ರಮವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರರನ್ನು ವಕೀಲರಾದ ಪ್ರತೀಕ್‌ ಚಂದ್ರಮೌಳಿ ಮತ್ತು ಕೀರ್ತನಾ ನಾಗರಾಜ್‌ ಪ್ರತಿನಿಧಿಸಿದ್ದರು. ಸರ್ಕಾರದ ಪರವಾಗಿ ವಕೀಲ ಶೋಭಿತ್‌ ಎನ್.‌ ಶೆಟ್ಟಿ ಹಾಜರಾಗಿದ್ದರು.